ಮಂತ್ರ ಮಾಂಗಲ್ಯ ಎಂಬುದು ಸರಳ ವಿವಾಹ ಮಾತ್ರವಲ್ಲ ಅದೊಂದು ಆದರ್ಶದ ಮಾರ್ಗ ಹಾಗೂ ಸಾಂಸ್ಕೃತಿಕ ವಾದ ಮಹೋನ್ನತ ಆಶಯ,..
1 min read
ಅವಿನ್ ಟಿವಿ ಸುದ್ದಿಜಾಲ ✒️* ಮಂತ್ರ ಮಾಂಗಲ್ಯ ಎಂಬುದು ಸರಳ ವಿವಾಹ ಮಾತ್ರವಲ್ಲ ಅದೊಂದು ಆದರ್ಶದ ಮಾರ್ಗ ಹಾಗೂ ಸಾಂಸ್ಕೃತಿಕ ವಾದ ಮಹೋನ್ನತ ಆಶಯ,
ಮತ್ತೆಲ್ಲರನ್ನು ಬಿಡಿ,,,, ಈ ಚಳುವಳಿಗಾರರು ಹೋರಾಟಗಾರರು ಸಾಹಿತಿಗಳು ಕವಿಗಳು ಲೇಖಕರು ಎಷ್ಟರಮಟ್ಟಿಗೆ ತಾವು ಮತ್ತು ತಮ್ಮ ಮಕ್ಕಳನ್ನು ಕುವೆಂಪು ವಿರಚಿತ ಮಂತ್ರ ಮಾಂಗಲ್ಯ ಸಂಹಿತೆಗೆ ಒಳಪಡಿಸಿದ್ದಾರೆ? ಅದ್ದೂರಿ ಮದುವೆಗೆ ಓಲಗ ಬಾರಿಸಿದಸ್ಟು ಈ ಸರಳ ವಿವಾಹ ಮಾರ್ಗದತ್ತ ಕಾಲಿಟ್ಟವರು ಕಡಿಮೆ. ಒಂದು ಆದರ್ಶ ಯಾಕೆ ಜನಪ್ರಿಯವಾಗಿ ಜಾರಿಗೊಳ್ಳಲು ಇಷ್ಟೊಂದು ಹಿಂದೂ ಮುಂದು ನೋಡುತ್ತಿದೆ ? ಅನುಸುತಿದೆ.
ಕುವೆಂಪು ಅವರು ಮಂತ್ರ ಮಾಂಗಲ್ಯ ಸಂಹಿತೆ ರಚಿಸುವಾಗ ಅವರು ಆಶಯ ಪಟ್ಟಂತೆ, ತೇಜಸ್ವಿ ~ ರಾಜೇಶ್ವರಿ ದಂಪತಿಗಳು ಈ ಮಂತ್ರ ಮಾಂಗಲ್ಯಕ್ಕೆ ಪ್ರಥಮ ಜೋಡಿಯಾಗಿ ಕಾಲಿಟ್ಟು ಮಾದರಿ ಮದುವೆಯಾದಂತೆ, ಸಾಹಿತಿಗಳು ಕವಿಗಳು ಲೇಖಕರು ಈ ಮಂತ್ರ ಮಾಂಗಲ್ಯದ ಬಗ್ಗೆ ಸಾಕಷ್ಟು ವ್ಯಾಖ್ಯಾನ ಮಾಡಿ ಮಾತನಾಡುತ್ತಾರೆ, ಬರೆಯುತ್ತಾರೆ, ವೇದಿಕೆಗಳ ಮೇಲೆ ಈ ಮಂತ್ರ ಮಾಂಗಲ್ಯವನ್ನ ಕುರಿತು ವಿಮರ್ಶೆ ಮಾಡುತ್ತಾರೆ, ಆದರೂ ಮಾತನಾಡಿದಷ್ಟು ಬರೆದಷ್ಟು ಈ ಜನ ಮಂತ್ರ ಮಾಂಗಲ್ಯಕ್ಕೆ ಕೊರಳೊಡ್ಡಲೇ ಇಲ್ಲ, ಮಂತ್ರ ಮಾಂಗಲ್ಯ ರಚಿಸಿ ಅರ್ಧ ಶತಮಾನಕ್ಕೂ ಹೆಚ್ಚು ವರ್ಷಗಳು ಕಾಲ ಗರ್ಭದೊಳಗೆ ಸರಿದು ಹೋಗಿದ್ದರೂ ಕೂಡ ಕೇವಲ ಬೆರಳೆಣಿಕೆಯಷ್ಟು ಜನ ಮಾತ್ರ ಈ ಸರಳವಾದ ಆದರ್ಶವಾದ ಮಂತ್ರ ಮಾಂಗಲ್ಯದ ಪ್ರಕಾರ ವಿವಾಹವಾಗಿದ್ದಾರೆ.
ಆದರ್ಶವಾದ ಈ ಮಂತ್ರ ಮಾಂಗಲ್ಯ ವಿವಾಹ ಸಂಹಿತೆಯನ್ನು ಹೆಚ್ಚೆಚ್ಚು ಯುವ ಸಮುದಾಯಕ್ಕೆ ಪರಿಚಯ ಮಾಡಿಕೊಟ್ಟು ಅದನ್ನು ಜಾರಿಗೊಳಿಸುವ ಅವಶ್ಯಕತೆ ಇದೆ. ಮಂತ್ರ ಮಾಂಗಲ್ಯ ಮದುವೆ ಆಗುವದೆಂದರೆ ಕೇವಲ ಅದು ಮದುವೆ ಮಾತ್ರ ಅಲ್ಲ, ಅದು ಜಾತೀಯತೆಯನ್ನು ತೊಲಗಿಸುವ, ಸೌಹಾರ್ದತೆ ಮತ್ತು ಸಹಿಷ್ಣತೆಯನ್ನು ಬಿತ್ತುವ ಗಾಢವಾದ ಮನುಷ್ಯ ಸಂಬಂಧದ ಮಾರ್ಗದಲ್ಲಿ ಕೊಂಡೊಯ್ಯುವ ಸಾಮಾಜಿಕ ಬದ್ಧತೆ ಎನ್ನಬಹುದು.
ಪೂರ್ಣಚಂದ್ರ ತೇಜಸ್ವಿ ಅವರು ತಾವು ಮಂತ್ರ ಮಾಂಗಲ್ಯ ಮಾಡಿಕೊಂಡ ಬಗ್ಗೆ ಅಣ್ಣನ ನೆನಪು ಪುಸ್ತಕದಲ್ಲಿ ಬರೆದ ಕೆಲವು ಸಾಲುಗಳನ್ನು ಅವಿನ್ ಟಿವಿ ಸುದ್ದಿಜಾಲ ತನ್ನ ಓದುಗರಿಗಾಗಿ ಕೊಡ ಮಾಡಿದೆ.
👇 ••••••••••••👇
ಅಣ್ಣ ಮಾಡಿದ ಮೊಟ್ಟ ಮೊದಲ ಸರಳ ವಿವಾಹ ಎಂದರೆ ನನ್ನದೇ. ನನ್ನ ಮದುವೆ ಸಂದರ್ಭದಲ್ಲಿ ನನಗೆ ವಿಪರೀತ ಸಂಕೋಚ .ಅಣ್ಣನ ಹತ್ತಿರ ಇದನ್ನೆಲ್ಲ ಪ್ರಸ್ತಾಪಿಸುವುದು ಹೇಗೆ ? ಎಂದು.
ನಾನು ಬಹಳ ಯೋಚನೆ ಮಾಡಿ ಕೊನೆಗೆ ಸುಂದರೇಶನಿಗೆ ಗಂಟು ಬಿದ್ದೆ. “ಮಾರಾಯ ನನ್ನ ಮದುವೆ ವಿಚಾರ ಒಂಚೂರು ಅಣ್ಣನ ಹತ್ತಿರ ಹೇಳಿ, ಹೇಗೆ ಮಾಡಬೇಕು ಇತ್ಯಾದಿಗಳನ್ನು ಕೇಳಿಕೊಂಡು ಬಾರಯ್ಯ” ಎಂದು ಮನವಿ ಮಾಡಿಕೊಂಡೆ.
ಸುಂದರೇಶ ಆ ಸಭೆ ಸಮಾರಂಭ ಮಾಡುವುದರಲ್ಲಿ ಎತ್ತಿದ ಕೈ. ಆದ್ದರಿಂದ ಈ ಜವಾಬ್ದಾರಿ ವಹಿಸಲು ಅವರಿಗಿಂತ ಸೂಕ್ತ ವ್ಯಕ್ತಿ ಇನ್ನೊಬ್ಬರು ಇರಲಿಲ್ಲ. “ಇರಲಿ ಬಿಡೋ, ನಾನಿರಬೇಕಾದರೆ ಯಾಕೆ ಯೋಚನೆ ಮಾಡ್ತೀಯ” ಎಂದು ಆಶ್ವಾಸನೆ ಕೊಟ್ಟ ಸಂದೇಶವನ್ನು, ಮೂಡಿಗೆರೆಯ ಬಸ್ ಸ್ಟ್ಯಾಂಡಿನಲ್ಲಿ ಮೈಸೂರು ಬಸ್ ಹತ್ತಿಸಿದ್ದು ನನಗಿನ್ನೂ ಕಣ್ಣಿಗೆ ಕಟ್ಟಿದಂತಿದೆ.
ನಾನಿದನ್ನು ಬರೆಯುವ ಸಂದರ್ಭಕ್ಕೆ ಅಣ್ಣನೂ ಇಲ್ಲ ಸುಂದರೇಶನೂ ಇಲ್ಲ. ಕಾಲ ಸರಿಯುವ ವೇಗ ನೋಡಿದರೆ ದಿಗ್ಭ್ರಮೆಯಾಗುತ್ತದೆ.
ಸುಂದರೇಶ ಹೋಗುವಾಗಲೇ ಮದುವೆ ಹೇಗೆ ಮಾಡಬಹುದು ಎಂಬುದರ ವಿವರಗಳನ್ನೆಲ್ಲಾ ಯೋಚಿಸಿಕೊಂಡೇ ತೋರುತ್ತದೆ. ನನ್ನ ಮದುವೆ ಅನಂತರ ಅಣ್ಣ ಹಾಕಿಕೊಟ್ಟ ಮೇಲ್ಪಂಕ್ತಿಯನ್ನು ಅನುಸರಿಸಿ ಸುಂದರೇಶನ ನೇತೃತ್ವದಲ್ಲಿ ನನ್ನೆಲ್ಲಾ ಮಿತ್ರರೂ ಮದುವೆಯಾಗಿದ್ದಲ್ಲದೇ, ಅವನೂ ಶಾಮಣ್ಣನೂ ರಾಮದಾಸ್ ಮಾಡಿಸಿರುವ ಮದುವೆಗಳಂತೂ ಲೆಕ್ಕವೇ ಇಲ್ಲವೆಂದು ಹೇಳಬಹುದು.
ಅಣ್ಣ ಇದಕ್ಕಾಗಿ “ಮಂತ್ರ ಮಾಂಗಲ್ಯ” ಎಂಬ ಚಿಕ್ಕ ಪುಸ್ತಕ ಬರೆದರು. ಅದರಲ್ಲಿ ಅವರು ದಿನವೂ ದೇವರ ಮನೆಯಲ್ಲಿ ಧ್ಯಾನ ಮಾಡುತ್ತಾ ಹೇಳುತ್ತಿದ್ದ ದೇವಿ ಸ್ತೋತ್ರ ಮುಂತಾವುಗಳನ್ನು ಸೇರಿಸಿದ್ದರು.
ನಾನೊಮ್ಮೆ ಅಣ್ಣನ ಹತ್ತಿರ ಮಾತಾಡುತ್ತಾ…
“ಇದರಲ್ಲಿ ಸಂಸ್ಕೃತ ಶ್ಲೋಕಗಳನ್ನೆಲ್ಲಾ ಸೇರಿಸಿರುವುದರಿಂದ ಇದು ಸಾಂಪ್ರದಾಯಕ ವಿವಾಹದಂತೆಯೇ ನೋಡುವವರಿಗೆ ಅನಿಸುವುದಿಲ್ಲವೇ ?” ಎಂದು ಕೇಳಿದೆ.
ಅದಕ್ಕೆ ಅಣ್ಣ “ಇದರಲ್ಲಿರುವುದು ಇಡೀ ಮನುಕುಲದ ಶ್ರೇಯಸ್ಸನ್ನು ಕೋರುವ ಮಹೋನ್ನತ ಆಶಯಗಳೇ ಹೊರತು ಬೇರೇನು ಇಲ್ಲ. ವಿವಾಹಕ್ಕೆ ಒಂದು ಸಾಂಸ್ಕೃತಿಕ ಅರ್ಥಪೂರ್ಣತೆ ಬರಲೆಂದೇ ಅದನ್ನು ಸೇರಿಸಿದ್ದೇನೆ ಎಂದು ಹೇಳಿದರು.
ಆದರೆ ಅಣ್ಣನಿಗೆ ನಾನು ಹೇಳಿದ್ದರಲ್ಲಿ ಸತ್ಯ ಇದೆ ಎಂದೆನಿಸಿತೋ ಏನೋ, ಅನಂತರ ಕೆಲವು ವಿಚಾರಗಳನ್ನು ಸೂಚಿಸಿ ಗದ್ಯದಲ್ಲಿ ಒಂದು ಸಂಹಿತೆ ಬರೆದು ಅದರಲ್ಲಿ ಸೇರಿಸಲು ಹೇಳಿದರು. ನಾನು ನಂಜುಂಡಸ್ವಾಮಿ ಕುಳಿತುಕೊಂಡು ಅವರು ಹೇಳಿದ ಅಂಶಗಳನ್ನು ಪ್ರಧಾನವಾಗಿ ಇಟ್ಟುಕೊಂಡು ಗದ್ಯದಲ್ಲಿ ವಿವಾಹ ಸಂಹಿತೆಯೊಂದನ್ನು ಬರೆದು ಅಣ್ಣನಿಗೆ ಕೊಟ್ಟೆವು. ಕನ್ನಡ ಗದ್ಯದಲ್ಲಿದ್ದ ಅದನ್ನು ಓದಿ ಉಪದೇಶಿಸುವುದು ಸಂಸ್ಕೃತ ಶ್ಲೋಕಗಳನ್ನು ಹೇಳುವುದಕ್ಕಿಂತ ಸುಲಭವಾದ್ದರಿಂದ ಆಮೇಲಿನ ಮಂತ್ರ ಮಾಂಗಲ್ಯದ ಸರಳ ವಿವಾಹಗಳಿಗೆಲ್ಲಾ ವಿವಾಹ ಸಂಹಿತೆಯೇ ಹೆಚ್ಚಾಗಿ ಉಪಯೋಗಿಸಿ ಮಾಡತೊಡಗಿದರು.
ಅಣ್ಣ ಹೇಳಿದ ಈ ಸುಧಾರಣೆಗೆ ಎಂಥ ಸಾಂಸ್ಕೃತಿಕ ಮಹತ್ವ ಇತ್ತೆಂದರೆ, ಇದರಿಂದ ಸ್ಥಗಿತಗೊಂಡಿದ್ದ ಶೂದ್ರ ಸಮುದಾಯದಲ್ಲಿ ಇದ್ದಕ್ಕಿದ್ದ ಹಾಗೆ ಬದಲಾವಣೆಯ ಗಾಳಿ ಬೀಸಲಾರಂಬೀಸಿತು.
••••••••••••••••
ಡಿ.ಎಂ. ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ ….. ✒️
ಚಿಕ್ಕಮಗಳೂರು

