ನೈಜ ಮಾರುಕಟ್ಟೆಯ ಅನುಭವ ತಂದುಕೊಟ್ಟ ಕಡುವಂತಿ ಶಾಲೆಯ ಮಕ್ಕಳ ಸಂತೆ…
1 min read
ಅವಿನ್ ಟಿವಿ ಸುದ್ದಿಜಾಲ ✒️: ನೈಜ ಮಾರುಕಟ್ಟೆಯ ಅನುಭವ ತಂದುಕೊಟ್ಟ ಕಡುವಂತಿ ಶಾಲೆಯ ಮಕ್ಕಳ ಸಂತೆ.








ಓದುವುದಕ್ಕೂ ಸೈ ವ್ಯಾಪಾರಕ್ಕೂ ಜೈ ಎಂದ ಶಾಲಾ ವಿದ್ಯಾರ್ಥಿಗಳು.
ಚಿಕ್ಕಮಗಳೂರು ಫೆ ೨೫: ಓದು ಒಕ್ಕಾಲು ಬುದ್ದಿ ಮುಕ್ಕಾಲು ಎನ್ನುವಂತೆ ಓದು, ಆಟ ಪಾಠಕ್ಕೆ ಸೀಮಿತವಾಗಿದ್ದ ಚಿಕ್ಕಮಗಳೂರು ಸಮೀಪದ ಕಡವಂತಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ಇತ್ತೀಚೆಗೆ ಮಕ್ಕಳ ಸಂತೆಯಾಗಿ ಮಾರ್ಪಟ್ಟಿತ್ತು,
ಸಂತೆ ಎಂಬುದು ಒಂದು ಕೌಶಲ್ಯದ ಜಗತ್ತು, ವ್ಯಾಪಾರಕ್ಕೆ ಹಣ ಮಾತ್ರ ಬಂಡವಾಳವಾದರೆ ಸಾಲದು, ಗ್ರಾಹಕರಿಗೆ ತಮ್ಮ ವಸ್ತುಗಳನ್ನು ಕೊಂಡುಕೊಳ್ಳಲು ಯಾವ ರೀತಿ ಮನವರಿಕೆ ಮಾಡಿಕೊಡುತ್ತೇವೆ ಎಂಬ ಕೌಶಲ್ಯ ಕೂಡ ಬಹಳ ಮುಖ್ಯ,ವಿದ್ಯಾರ್ಥಿಗಳಿಗೆ ಸಂತೆಯ ಮೂಲಕ ಅನುಭವಾತ್ಮಕ ಕಲಿಕೆಗೆ ಒತ್ತು ನೀಡಿ ವ್ಯವಹಾರಿಕ ಕಲಿಕೆಯ ಜ್ಞಾನವನ್ನು ವಿದ್ಯಾರ್ಥಿ ಜೀವನದಲ್ಲೇ ಮೈಗೂಡಿಸುವ ಹಿನ್ನೆಲೆಯಲ್ಲಿ, ಆರ್ಥಿಕ ಸಾಕ್ಷರತಾ ಶಿಕ್ಷಣ ಚಟುವಟಿಕೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ನೈಜ ಮಾರುಕಟ್ಟೆ ಅನುಭವ ನೀಡುವ ಸಲುವಾಗಿ ಮಕ್ಕಳ ಸಂತೆಯನ್ನು ಇತ್ತೀಚಿಗೆ ಶಾಲಾ ಆವರಣದಲ್ಲಿ ಅತ್ಯಂತ ಆಕರ್ಷಣೀಯವಾಗಿ ಆಯೋಜಿಸಲಾಗಿತ್ತು.
ಕಡುವಂತಿ ಗ್ರಾಮವು ಚಿಕ್ಕಮಗಳೂರು ತಾಲೂಕಿನ ಮಲೆನಾಡಿನ ಹೃದಯ ಭಾಗ, ಮುತ್ತೋಡಿಯ ಭದ್ರಾ ಅಭಯಾರಣ್ಯಕ್ಕೆ ಅಂಟಿಕೊಂಡ ಮಲೆನಾಡಿನ ಒಂದು ಸಣ್ಣ ಹಳ್ಳಿ, ಇಂತಹ ಸಣ್ಣ ಹಳ್ಳಿಯಲ್ಲಿರುವ ಸರ್ಕಾರಿ ಮಾಧ್ಯಮಿಕ ಶಾಲೆಯು ಅಲ್ಲಿನ ಕ್ರಿಯಾಶೀಲ ಶಿಕ್ಷಕರು ಎಸ್ ಡಿ ಎಮ್ ಸಿ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಹಾಗೂ ಸಮುದಾಯದ ನೆರವಿನಿಂದ ಆಕರ್ಷಕವಾದ ಮಕ್ಕಳ ಸಂತೆಯನ್ನು ಏರ್ಪಡಿಸಿದ್ದರು.
ಈ ಮಕ್ಕಳ ಸಂತೆಯಲ್ಲಿ ತಾವೇ ಮನೆಯಲ್ಲಿ ಬೆಳೆದ ಹಣ್ಣುಗಳು, ತರಕಾರಿಗಳು, ಮೊಳಕೆ ಕಾಳುಗಳು, ಧಾನ್ಯಗಳು, ಹೂವು, ನಾಟಿ ಕೋಳಿ ಮೊಟ್ಟೆ,ಬಸಳೆ ಸೊಪ್ಪು, ನೆಲ್ಲಿಕಾಯಿ, ಪಪ್ಪಾಯಿ ಹಣ್ಣು, ಬಾಳೆಹಣ್ಣು, ವೀಳ್ಯದೆಲೆ, ಏಲಕ್ಕಿ, ಮೆಣಸು ಮತ್ತು ಎಳನೀರು, ತೆಂಗಿನಕಾಯಿ ಸೇರಿದಂತೆ ಬಗೆ ಬಗೆಯ ಹಣ್ಣುಗಳು ತರಕಾರಿಗಳು ಕಾಯಿಪಲ್ಲೆಗಳು ಶಾಲಾ ಸಂತೆಯಲ್ಲಿ ಎಲ್ಲಿಯೂ ಲೆಕ್ಕ ತಪ್ಪದಂತೆ ಅಂದಾಜು 25,000ಕ್ಕೂ ಹೆಚ್ಚು ರೂಪಾಯಿಗಳ ವ್ಯಾಪಾರ ವಹಿವಾಟನ್ನು ಮಾಡಿದರು.
ಸಾಕಷ್ಟು ಪ್ರಚಾರ ಕೊಟ್ಟು ಆಕರ್ಷಣೀಯವಾಗಿ ತೆರೆದಿದ್ದ ಶಾಲಾ ಸಂತೆಗೆ ಸ್ಥಳೀಯ ನೂರಾರು ಗ್ರಾಹಕರು ಕುತೂಹಲ ಮತ್ತು ಸಡಗರದಿಂದ ಆಗಮಿಸಿ ಮಕ್ಕಳೊಂದಿಗೆ ವ್ಯಾಪಾರ ಮಾಡುತ್ತಿದ್ದ ರೀತಿ ಸಾಮಾನ್ಯ ಸಂತೆಗಿಂತಲೂ ವಿಶೇಷವಾಗಿತ್ತು. ಭವಿಷ್ಯದ ದಿನಗಳಲ್ಲಿ ಈ ವಿದ್ಯಾರ್ಥಿಗಳು ದೊಡ್ಡ ದೊಡ್ಡ ಉದ್ದಿಮೆಗಳನ್ನು ನಡೆಸಿ ಸ್ವಾವಲಂಬಿಯಾಗಿ ಬದುಕಿ ನೂರಾರು ಜನರಿಗೆ ಉದ್ಯೋಗವನ್ನು ಕೊಡುವಂತ ಉದ್ಯಮಿದಾರರಾಗಲಿ ಎಂದು ಮಕ್ಕಳ ಸಂತೇಯಲ್ಲಿ ನೆರೆದಿದ್ದವರು ತಮ್ಮ ಅಂತರಾಳದ ಮಾತುಗಳನ್ನು ಆಡುತ್ತಿದ್ದರು.
ಮಕ್ಕಳಲ್ಲಿ ಅನುಭವಾತ್ಮಕ ಕಲಿಕೆ ಉಂಟುಮಾಡಲು ಶಿಕ್ಷಕರು ಮಕ್ಕಳಿಗೆ ವಿನೂತನ ಮಾದರಿಯಲ್ಲಿ ಕಲಿಸುತ್ತಿರುವುದು ಪ್ರಶಂಶನೀಯವಾದುದು ಎಂದು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ರುದ್ರೇಶ್ ಕೆ, ಡಿ ಅವರು ಮಕ್ಕಳ ಸಂತೆ ಕಾರ್ಯಕ್ರಮ ಉದ್ಘಾಟಿಸಿ ಈ ಸಂದರ್ಭದಲ್ಲಿ ಮಾತನಾಡಿದರು.
ಕಡವಂತಿ ಗ್ರಾಮ ಪಂಚಾಯತಿ ಕಾರ್ಯದರ್ಶಿ ಗುರುರಾಜ್ ಅವರು ಇಂತಹ ಮಕ್ಕಳ ಸಂತೆಯಿಂದ ಮಕ್ಕಳ ಬೌದ್ಧಿಕ ಮನೋವಿಕಾಸದ ಜೊತೆಗೆ ವ್ಯವಹಾರ ಜ್ಞಾನ ಹೆಚ್ಚಾಗಿ ಇದು ಮುಂದೆ ವಿದ್ಯಾರ್ಥಿಗಳಿಗೆ ಹೆಚ್ಚು ಉಪಯುಕ್ತವಾಗುತ್ತದೆ ಎಂದು ಆಶಯ ನುಡಿಗಳನ್ನಾಡಿದರು.
ಶಾಲಾ ಮುಖ್ಯ ಶಿಕ್ಷಕರಾದ ಸುರೇಶ ಎನ್ ಕೆ ಅವರು ಮಕ್ಕಳ ಸಂತೆಯ ಉದ್ದೇಶ ಮತ್ತು ಮಹತ್ವವನ್ನು ಪ್ರಾಸ್ತಾವಿಕವಾಗಿ ತಿಳಿಸಿದರು.
ನಾಗರಾಜ್ ಸಿ ಇವರು ವಿದ್ಯಾರ್ಥಿಗಳಿಗೆ ಫೋನ್ ಪೇ, ಗೂಗಲ್ ಪೇ ಸ್ಕ್ಯಾನರ್ ಮೂಲಕ ಹಣ ಸ್ವೀಕರಿಸುವ ಬಗೆಯನ್ನು ತಿಳಿಸಿದ ಕಾರಣ ಸಾವಿರಾರು ರೂಪಾಯಿಗಳನ್ನು ಮಕ್ಕಳು ಆನ್ಲೈನ್ ಮೂಲಕವೆ ವ್ಯಾಪಾರ ನಡೆಸಿದರು.
ಪ್ರಾ, ಕೃ ಪ,ಸ, ಸಂಘದ ಕಾರ್ಯನಿರ್ವಹಣಾಧಿಕಾರಿ ಮಣಿಕಂಠ, ಸುಧೀರ್,
ಎಸ್ ಡಿ ಎಂ ಸಿ ಉಪಾಧ್ಯಕ್ಷೆ ಜ್ಯೋತಿ, ಸದಸ್ಯರಾದ ಗೀತಾ, ಅನ್ನಪೂರ್ಣ, ಭಾಗ್ಯ, ಸಹ ಶಿಕ್ಷಕಿ ಸರೋಜಾ ಮುಂತಾದವರು ಉಪಸ್ಥಿತರಿದ್ದರು.
•••••••••••••••
ಡಿ.ಎಂ.ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ …. ✒️
ಚಿಕ್ಕಮಗಳೂರು

