ನಿವೇಶನ ಸಮಸ್ಯೆ ಬಗೆಹರಿಸುವವರೆಗೂ ಫೆ.27ರಿಂದ ತಾ.ಪಂ. ಎದುರು ಅನಿರ್ಧಿಷ್ಟಾವದಿ ಧರಣಿ ಪ್ರಾರಂಭ*
1 min read
*ನಿವೇಶನ ಸಮಸ್ಯೆ ಬಗೆಹರಿಸುವವರೆಗೂ ಫೆ.27ರಿಂದ ತಾ.ಪಂ. ಎದುರು ಅನಿರ್ಧಿಷ್ಟಾವದಿ ಧರಣಿ ಪ್ರಾರಂಭ*
ಹಳೆಮೂಡಿಗೆರೆ ಹಾಗೂ ಗೋಣಿಬೀಡು ಗ್ರಾ.ಪಂ. ವ್ಯಾಪ್ತಿಯ ನಿವೇಶನ ರಹಿತರೆಲ್ಲರೂ ಫೆ.27ರಂದು ತಾ.ಪಂ. ಎದುರು ಅನಿರ್ಧಿಷ್ಟಾವದಿ ಧರಣಿ ನಡೆಸಲು ತೀರ್ಮಾನಿಸಲಾಗಿದೆ ಎಂದು ವಸತಿಗಾಗಿ ಹೋರಾಟ ಸಮಿತಿ ಗೌರವಾಧ್ಯಕ್ಷ ಬಿ.ರುದ್ರಯ್ಯ ಹೇಳಿದರು.
ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 2017ರಿಂದ ವಸತಿಗಾಗಿ ಹೋರಾಟ ಸಮಿತಿಯಿಂದ ನಿವೇಶನಕ್ಕಾಗಿ ನಡೆಸಿದ ಹೋರಾಟದ ಫಲವಾಗಿ ಹಳೆಮೂಡಿಗೆರೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಸರ್ವೆ ನಂ 7ರಲ್ಲಿ 8 ಎಕರೆ ಸರಕಾರಿ ಭೂಮಿಯಲ್ಲಿ 4 ಎಕರೆ ಭೂಮಿ ನಿವೇಶನಕ್ಕಾಗಿ ಕಾಯ್ದಿರಿಸಲಾಗಿದೆ. ಈಗಾಗಲೇ ಅಲ್ಲಿ 32 ಕುಟುಂಬ ವಾಸವಿದ್ದು, ಆ ಸ್ಥಳಕ್ಕೆ ಜೈಭೀಮ್ ಎಂದು ಹೆಸರಿಡಲಾಗಿದೆ. ಅಲ್ಲದೇ ಗ್ರಾ.ಪಂ.ಯಿಂದ ಕುಡಿಯುವ ನೀರಿನ ಸೌಲಭ್ಯ ಒದಗಿಸಿದ್ದು ಬಿಟ್ಟರೆ ಮೂಲಭೂತ ಸೌಲಭ್ಯ ಒದಗಿಸಿಲ್ಲ. ಕಳೆದ 6 ತಿಂಗಳ ಹಿಂದೆ ಗ್ರಾಮಸಭೆಯಲ್ಲಿ 70 ಮಂದಿ ಫಲಾನುಭವಿಗಳ ಆಯ್ಕೆ ನಡೆಸಲು ತೀರ್ಮಾನಿಸಿ, 48 ಫಲಾನುಭವಿಗಳ ದಾಖಲೆ ಪರಿಶೀಲಿಸಿ, ಬಾಕಿ ದಾಖಲೆ ಪರಿಶೀಲಿಸದೇ ಕಾಲಹರಣ ಮಾಡಲಾಗಿದೆ. ಅಲ್ಲದೇ ಗ್ರಾ.ಪಂ. ಆಡಳಿತ ವ್ಯವಸ್ಥೆ ವಿಸರ್ಜನೆಗೊಂಡಿದ್ದು, ಸಮಸ್ಯೆಗೆ ಪರಿಹಾರ ಸಿಗದಂತಾಗಿದೆ ಎಂದು ಹೇಳಿದರು.
ಗೋಣಿಬೀಡು ಗ್ರಾ.ಪಂ. ವ್ಯಾಪ್ತಿಯ ಮಣ್ಣಿಕೆರೆ ಗ್ರಾಮದ ಸರ್ವೆ ನಂ 127ರಲ್ಲಿ 3 ಎಕರೆ ಭೂಮಿ ನಿವೇಶನಕ್ಕಾಗಿ ಕಾಯ್ದಿರಿಸಲಾಗಿತ್ತು. ಅದರಲ್ಲಿ ಪ್ರಬಾವಿ ವ್ಯಕ್ತಿಗಳು ಮನೆ ನಿರ್ಮಿಸಿಕೊಂಡಿದ್ದು, ಅದನ್ನು ತಡೆಯದೇ ಪಂಚಾಯಿತಿ ನಿರ್ಲಕ್ಷ್ಯ ತೋರಿದೆ. ಶಾಸಕಿ ನಯನಾ ಮೋಟಮ್ಮ ಅವರು ನಿವೇಶನ ಸಮಸ್ಯೆ ಬಗೆಹರಿಸುವ ಬಗ್ಗೆ ಮಾತನಾಡುತ್ತಾರೆ ಹೊರತು, ಕಾರ್ಯರೂಪಕ್ಕೆ ತರಲು ಮುಂದಾಗುತ್ತಿಲ್ಲ. ಹಾಗಾಗಿ ನಿವೇಶನಕ್ಕಾಗಿ ಕಾಯ್ದಿರಿಸಿದ ಜಾಗದಲ್ಲಿ ನಿವೇಶನ ನೀಡಲು ಫಲಾನುಭವಿಗಳ ಪಟ್ಟಿ ತಯಾರಿಸಿ, ಹಕ್ಕು ಪತ್ರ ನೀಡುವವರೆಗೂ ತಾ.ಪಂ. ಎದುರು ಅನಿರ್ಧಿಷ್ಟಾವದಿ ಧರಣಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಗೋಷ್ಠಿಯಲ್ಲಿ ಸಮಿತಿಯ ಕಾರ್ಯದರ್ಶಿ ಶಿವಪ್ಪ ಉಪಸ್ಥಿತರಿದ್ದರು.

