लाइव कैलेंडर

March 2026
M T W T F S S
 1
2345678
9101112131415
16171819202122
23242526272829
3031  
09/03/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ನಮ್ಮ ಕಣ್ಮುಂದೆ ಆತ್ಮೀಯವಾಗಿ ಮೂಡುವ ಚಲನಚಿತ್ರ ಕಲಾವಿದರಲ್ಲಿ ಲೋಕನಾಥ್ ಪ್ರಮುಖರು….

1 min read

ನಮ್ಮ ಕಣ್ಮುಂದೆ ಆತ್ಮೀಯವಾಗಿ ಮೂಡುವ ಚಲನಚಿತ್ರ ಕಲಾವಿದರಲ್ಲಿ ಲೋಕನಾಥ್ ಪ್ರಮುಖರು.

ನಾಗರಹಾವು ಚಿತ್ರದಲ್ಲಿ ರಾಮಾಚಾರಿ ಕಾಪಿ ಹೊಡೆದಾಗ ಆತನನ್ನು ಅವಮಾನಿಸಿದ್ದಕ್ಕಾಗಿ, ಆತನಿಂದ ಲೈಟು ಕಂಬಕ್ಕೆ ಕಟ್ಟಲ್ಪಟ್ಟ ಪ್ರಿನ್ಸಿಪಾಲ್ ಶ್ಯಾಮರಾಯರಾಗಿ, ಬೂತಯ್ಯನ ಮಗ ಅಯ್ಯು ಚಿತ್ರದಲ್ಲಿ ಚಪ್ಪಲಿ ಹೊಲೆಯುವ ಮಾಚನಾಗಿ; ಅದರಲ್ಲೂ ಬೂತಯ್ಯನ ಮನೆ ಉಪ್ಪಿನಕಾಯಿ ಜಾಡಿ ಕಾಲಿ ಮಾಡುವ ಅವರ ಅಭಿನಯ ಕನ್ನಡ ಚಲನಚಿತ್ರರಂಗ ಇರುವವರೆಗೂ ಅಜರಾಮರ.  ಸಂಸ್ಕಾರ, ಮಿಂಚಿನ ಓಟ, ಕಾಕನ ಕೋಟೆ, ಕಾಡು ಬೆಳದಿಂಗಳು ಮುಂತಾದ ಕಲಾತ್ಮಕ  ಚಿತ್ರಗಳಲ್ಲಿನ ನಿರ್ವಹಣೆಗೆ; ಒಲವಿನ ಆಸರೆ, ಮನೆ ಮನೆ ಕಥೆ, ಹೌಸ್ ಫುಲ್, ಪುಷ್ಪಕ ವಿಮಾನ, ಬೆಳದಿಂಗಳ ಬಾಲೆ, ಬಂಗಾರದ ಮನುಷ್ಯ, ಕಥಾ ಸಂಗಮ, ಗೆಜ್ಜೆಪೂಜೆ, ಹೊಸ ನೀರು,  ಕಿಟ್ಟು ಪುಟ್ಟು, ಎಲ್ಲರಂಥಲ್ಲ  ನನ್ನ  ಗಂಡ,  ಪ್ರೇಮಾಚಾರಿ  ಅಂತಹ ಚಿತ್ರಗಳಲ್ಲಿನ  ಅಸಂಖ್ಯಾತ ಪಾತ್ರಗಳಿಗಾಗಿ ಅವರ ಬಗೆಗಿನ ಪ್ರಶಂಸೆಗಳನ್ನು,  ಪತ್ರಿಕೆಗಳಿಂದಲೂ ಜನಸಾಮಾನ್ಯರಿಂದಲೂ  ಕಾಣುತ್ತಲೇ ಬೆಳೆದವರು ನಾವು. ಚಿತ್ರರಂಗವಲ್ಲದೆ ರಂಗಭೂಮಿಯ ಬಹಳಷ್ಟು ಉತ್ತಮ ಪ್ರಯೋಗಗಳಿಗೂ, ಕಿರುತೆರೆಯ ಉತ್ತಮ ಪಾತ್ರಗಳಿಗೂ  ಲೋಕನಾಥರು ಮೆರುಗು ತಂದಿದ್ದರು.

‎ಶಿಸ್ತುಬದ್ಧ ಜೀವನದ, ರಂಗಭೂಮಿ ಮತ್ತು  ಚಲನಚಿತ್ರಲೋಕದ  ಮೇರು ಕಲಾವಿದರಾದ ಲೋಕನಾಥರು  1927ರ ಆಗಸ್ಟ್ 14ರಂದು ಬೆಂಗಳೂರಿನಲ್ಲಿ ಜನಿಸಿದರು. ತಂದೆ ಹನುಮಂತಪ್ಪ.   ತಾಯಿ ಗೌರಮ್ಮ. ಅವರದ್ದು ಜವಳಿ ವಾಣಿಜ್ಯ ವಹಿವಾಟಿನ ಕುಟುಂಬ.  ಹೆಣ್ಣು ಮಕ್ಕಳು ಗಂಡು ಮಕ್ಕಳು ಎಂಬ ಭೇದವಿಲ್ಲದೆ  ಸಂಜೆಯ ಒಳಗೆ ಮನೆ ಸೇರಬೇಕು ಎಂಬಂತಹ  ಕಟ್ಟುಪಾಡಿನ ವಾತಾವರಣವಿದ್ದ  ಸುಮಾರು 40 ಜನರಿದ್ದ ಸಂಪ್ರದಾಯಸ್ತ  ಅವಿಭಕ್ತ ಕುಟುಂಬ ಅವರದ್ದು.  ಮೂಲತ ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದ ಲೋಕನಾಥರು ಕುಟುಂಬದ  ವ್ಯಾಪಾರಕ್ಕೆ ಆಸರೆಯಾಗಿರಲು ಓದು ಬಿಟ್ಟರು.  ಮನೆಯಲ್ಲಿದ್ದ ವೇಳೆಯಲ್ಲಿ  ಸಂಗೀತದ ಮೇಲಿನ ಆಸೆಯಿಂದ ಸಂಗೀತವನ್ನು ಸುಮ್ಮನೆ ಗುನುಗುತ್ತಿದ್ದರು.   ತಬಲಾ ಕಲಿಯಬೇಕೆಂಬ ಆಸೆಗೆ  ತಬಲಾ ತಂದಿಟ್ಟುಕೊಂಡಾಗ  ಮನೆಯ ವಾತಾವರಣ ಅದಕ್ಕೆ ಸರಿಹೋಗುವುದಿಲ್ಲ ಎಂದು ಅದನ್ನು ಕೈ ಬಿಟ್ಟರು.

‎ವ್ಯಾಯಾಮ ಕಲಿಯಲು ಪ್ರಖ್ಯಾತ ಬರಹಗಾರ ಹಾಗೂ  ಅಂಗಸೌಷ್ಟವದ ಮೇರು ಆಚಾರ್ಯರಾದ ಕೆ.ವಿ. ಅಯ್ಯರ್ ಸಂಪರ್ಕಕ್ಕೆ ಬಂದ ಸಂದರ್ಭದಲ್ಲಿ   ಕೈಲಾಸಂ  ಅವರಿಂದಾಗಿ ನಾಟಕರಂಗಕ್ಕೆ ಪ್ರವೇಶವಾಯಿತು.    ಮುಂದೆ 1952ರಲ್ಲಿ ರವಿ ಕಲಾವಿದರು ಸಂಸ್ಥೆ ಸೇರಿ ಅಭಿನಯಿಸಿದ ಮೊದಲ ನಾಟಕ ‘ಬಂಡವಾಳವಿಲ್ಲದ ಬಡಾಯಿ’.   ಒಲ್ಲೆನೆಂದರೂ ಬಿಡದೆ ಮತ್ತೊಮ್ಮೆ ಬಣ್ಣ ಹಚ್ಚಿದ್ದು ದಾಶರಥಿ ದೀಕ್ಷಿತರ ‘ಅಳಿಯ ದೇವರು’ ನಾಟಕ.

‎ಹೀಗೆ ಸಂಪ್ರದಾಯಸ್ಥ ಕುಟುಂಬದ ವಿರೋಧದ ನಡುವೆ ರಂಗಭೂಮಿ ಪ್ರವೇಶ ಮಾಡಿದ ಲೋಕನಾಥರು ರಕ್ತಾಕ್ಷಿ, ವಿಗಡ ವಿಕ್ರಮರಾಯ, ಬಿರುದಂತೆಂಬರ ಗಂಡ, ಬಹದ್ದೂರ್ ಗಂಡು, ಬಿಡುಗಡೆ, ಚಂದ್ರಹಾಸ, ಮನವೆಂಬ ಮರ್ಕಟ ನಾಟಕಗಳಲ್ಲಿ ಪ್ರಮುಖ ಪಾತ್ರ ವಹಿಸಿ ಅಪಾರ  ಖ್ಯಾತಿ ಗಳಿಸಿದರು. ಮರಾಠಿ ನಾಟಕಗಳ ಅನುವಾದವಾದ  ‘ತನುವು ನಿನ್ನದೆ ಮನವು ನಿನ್ನದೆ (ನೂರಾರು ಪ್ರದರ್ಶನ ಕಂಡ ನಾಟಕ)’, ‘ನಾನೇನು ಹೇಳಬೇಕು’, ‘ಹಂಚು ಬೆಳದಿಂಗಳು’ ಮುಂತಾದ ನಾಟಕಗಳನ್ನು ನಿರ್ದೇಶಿಸಿದರು.  ಬಿ.ವಿ. ಕಾರಂತರ ನಿರ್ದೇಶನದ ಗೋಸ್ಟ್‌, ಈಡಿಪಸ್‌, ನಾಗೇಶರ ನಿರ್ದೇಶನದ ನಾಟಕಗಳು, ಸಮುದಾಯದ ಪ್ರಸನ್ನರ ತಾಯಿ, ಗೆಲಿಲಿಯೋ ಮುಂತಾದವು ಅವರಿಗೆ ಮತ್ತಷ್ಟು ಖ್ಯಾತಿ ತಂದುಕೊಟ್ಟವು.

‎ಕಾಲೇಜಿನ ಪಠ್ಯ ಪುಸ್ತಕವಾಗಿದ್ದ 272 ಪುಟಗಳ ಗೆಲಿಲಿಯೋ ನಾಟಕದಲ್ಲಿ ಗೆಲಿಲಿಯೋ ಪಾತ್ರದಾರಿ ಆದ  ಲೋಕನಾಥರು ಪ್ರಾರಂಭದಿಂದ ಕೊನೆಯ ದೃಶ್ಯದವರೆಗೂ ನಿರಂತರವಾಗಿ ರಂಗದ ಮೇಲಿರಬೇಕಿತ್ತು. ಸಂಭಾಷಣೆಗಳನ್ನು ಎಲ್ಲಿಯೂ ತಪ್ಪದೆ ಪಾತ್ರವನ್ನು ಯಶಸ್ವಿಯಾಗಿ ನಿರ್ವಹಿಸಿದರು.   ನಾಟಕ ಯಶಸ್ವಿಯಾಯಿತು.   “ಅದು ನನ್ನ ಬದುಕಿನ ಅವಿಸ್ಮರಣಿಯ ಕ್ಷಣ” ಎನ್ನುತ್ತಿದ್ದರು ಲೋಕನಾಥ್.

‎‘ಸಂಸ್ಕಾರ’ದ ಮೂಲಕ ಚಿತ್ರರಂಗ ಪ್ರವೇಶಿಸಿದರಾದರೂ,  ‘ಗೆಜ್ಜೆಪೂಜೆ’ ಮೊದಲು ಬಿಡುಗಡೆಯಾದ ಚಿತ್ರ.  ಮುಂದೆ  ಬಂಗಾರದ ಮನುಷ್ಯ, ದೂರದ ಬೆಟ್ಟ, ಭೂತಯ್ಯನ ಮಗ ಅಯ್ಯು, ಶರಪಂಜರ, ನಾಗರಹಾವು, ಹೇಮಾವತಿ, ಬಂಗಾರದ ಪಂಜರ, ಹೃದಯ ಸಂಗಮ, ಕೃಷ್ಣ ರುಕ್ಮಿಣಿ ಸತ್ಯಭಾಮ, ಭಾಗ್ಯಜ್ಯೋತಿ, ಕೂಡಿ ಬಾಳೋಣ, ಮಿಂಚಿನ ಓಟ, ಹೊಸ ನೀರು, ಮನೆ ಮನೆ ಕಥೆ, ಒಲವಿನ ಆಸರೆ   ಹೀಗೆ ಅವರು ನಟಿಸಿದ ಚಿತ್ರಗಳ ಸಂಖ್ಯೆ ಸುಮಾರು 650ರ ಸಮೀಪದ್ದು.

‎”ಮಿಂಚಿನ ಓಟ ಚಿತ್ರದಲ್ಲಿ ಪೋಷಕ ಪಾತ್ರಕ್ಕೆ ಪ್ರಶಸ್ತಿ ಬಂದದ್ದು ಬಿಟ್ಟರೆ ಉಳಿದಂತೆ ನನಗೂ ಪ್ರಶಸ್ತಿಗಳಿಗೂ ಸಂಬಂಧವೇ ಇಲ್ಲ ಎನ್ನುವಂತಾಗಿದೆ” ಎನ್ನುತ್ತಿದ್ದರು ಲೋಕನಾಥ್.  ಆದರೆ ಅವರಿಗೆ ಜನರ ಪ್ರೀತಿ ಅಪಾರವಾಗಿ ದೊರೆತ ತೃಪ್ತಿಯಿತ್ತು.   “ಪ್ರತಿಯೊಬ್ಬ ಕಲಾವಿದನನ್ನೂ, ಅವನು ಮಾಡಿದ ಪಾತ್ರಗಳ ಮೂಲಕ ಅವನನ್ನು ಪ್ರಶಂಸಿಸಿದರೆ ಅವನಿಗೆ ಅದಕ್ಕಿಂತ ಬೇರೆ ಪ್ರಶಸ್ತಿ ಬೇಕಿಲ್ಲ. ನನಗೂ ಅಂತಹ ಅನುಭವ ಭೂತಯ್ಯನ ಮಗ ಅಯ್ಯು ಚಿತ್ರದಲ್ಲಾಯಿತು” ಎನ್ನುತ್ತಿದ್ದರು ಲೋಕನಾಥ್.   “ಆ ಚಿತ್ರ ಯಶಸ್ವಿಯಾದ ನಂತರ ಮಂಡ್ಯದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಅಲ್ಲಿನ ಮಹಿಳೆಯೊಬ್ಬರು ಉಪ್ಪಿನಕಾಯಿ ಜಾಡಿಯನ್ನು ತಂದು ನನ್ನ ಮುಂದಿಟ್ಟು ಎಷ್ಟು ಬೇಕಾದರೂ ತಿನ್ನು. ಆದರೆ ಕದಿಯಬೇಡ ಎಂದು ಹೇಳಿದಳು. ಬೀದರಿನಲ್ಲಿ ಒಬ್ಬಳು ಮಹಿಳೆ ನನಗೆ ರೊಟ್ಟಿ ತಿನ್ನಿಸಿದರು. ಹೀಗೆ  ನನ್ನ ಪಾತ್ರದ ಜನಪ್ರಿಯತೆ ನನಗೆ ತಿಳಿಯಿತು” ಎಂದು ಲೋಕನಾಥ್ ನೆನಪು ಮಾಡಿಕೊಳ್ಳುತ್ತಿದ್ದರು.

‎ಲೋಕನಾಥ್ ಅವರು ಕಿರುತೆರೆಯಲ್ಲೂ ಹಲವಾರು ಧಾರಾವಾಹಿಗಳಲ್ಲಿ ಅಭಿನಯಿಸಿದ್ದರು. ಶಂಕರನಾಗ್  ನಿರ್ದೇಶನದ  ಮಾಲ್ಗುಡಿ  ಡೇಸ್ ಅಲ್ಲದೆ,    ಅನೀಶ್, ನಿರೀಕ್ಷೆ ಮುಂತಾದ ಧಾರವಾಹಿಗಳನ್ನು ನಿರ್ಮಿಸಿ ನಿರ್ದೇಶಿಸಿದ್ದರು.  ಶಾಂಡಿಲ್ಯ ಕ್ರಿಯೇಷನ್ಸ್ ಎಂಬ ಹೆಸರಿನಲ್ಲಿ ಸ್ಟುಡಿಯೋ ತೆರೆದರು.  ಆದರೆ ಜನ ಚೆನ್ನಾಗಿ ಉಪಯೋಗಿಸಿಕೊಂಡು ದುಡ್ಡು ಕೊಡಬೇಕು ಎಂಬುದನ್ನು ಜಾಣತನದಿಂದ ಮರೆತಾಗ ಸ್ಟುಡಿಯೋವನ್ನು ಮುಚ್ಚಿದರು.

‎ಚಿತ್ರರಂಗವೆಂಬ ತಳುಕಿನ ಲೋಕದಲ್ಲಿ ನಟ ನಟಿಯರ ಬಗ್ಗೆ ಹೇಳುವಾಗ ಬಹಳಷ್ಟು ವೇಳೆ ಬಣ್ಣ ಬಣ್ಣದ ಸಂಗತಿಗಳೇ ಮೆರುಗು ಪಡೆಯುತ್ತವೆ.  ಆದರೆ ಲೋಕನಾಥ್ ಅಂತಹ ಶ್ರೇಷ್ಠ ಕಲಾವಿದನ ಬಗ್ಗೆ ಮಾತುಗಳು ಮೂಡುವುದಕ್ಕಿಂತ ಅವರು ನಮ್ಮ ಹೃದಯದಲ್ಲಿ ಉಳಿಸಿರುವ ಪ್ರೀತಿ ಗೌರವಗಳು ಪ್ರಧಾನವಾಗಿ, ಮಾತುಗಳು ಮೂಕವಾಗಿ ಬಿಡುತ್ತವೆ.

‎ಲೋಕನಾಥ್ ಅವರು 91  ವರ್ಷಗಳ ಜೀವನ ನಡೆಸಿ 2018ರ ಡಿಸೆಂಬರ್ 31ರಂದು ಬದುಕಿಗೆ ವಿದಾಯ ಹೇಳಿದರು.

‎ವರದಿ….

ರವಿಕುಮಾರ್.  ಬೆಂಗಳೂರು.

About Author

Leave a Reply

Your email address will not be published. Required fields are marked *

You may have missed