ದಲಿತ ನೌಕರರ ಜೊತೆ ಪಿಸುಮಾತು -ದೇವನೂರ ಮಹಾದೇವ…..
1 min read
ದಲಿತ ನೌಕರರ ಜೊತೆ ಪಿಸುಮಾತು
-ದೇವನೂರ ಮಹಾದೇವ
[ಎದೆಗೆ ಬಿದ್ದ ಅಕ್ಷರ ಸಂಕಲನದಿಂದ ಆಯ್ದ ಒಂದು ಬರಹ ನಮ್ಮ ಮರು ಓದಿಗಾಗಿ…]
ಫೋಟೋ ಕೊಡುಗೆ- ಎಚ್.ಆರ್.ನವೀನ್ ಕುಮಾರ್
ದಲಿತ ನೌಕರರ ಬಗ್ಗೆ ಪ್ರಚಲಿತದಲ್ಲಿರುವ ಒಂದು ಮಾತು ಹೀಗಿದೆ: ‘ತನಗೆ ಏನಾದರೂ ಅನ್ಯಾಯ ಕಷ್ಟ ಬಂದಾಗ ದಲಿತ ನೌಕರ ಅದನ್ನು ಇಡೀ ಜನಾಂಗಕ್ಕೇ ಆದ ಅನ್ಯಾಯ ಎಂಬಂತೆ ಗೋಳಾಡುತ್ತಾನೆ. ಇಲ್ಲದಿದ್ದರೆ ಸುಮ್ಮನಿರುತ್ತಾನೆ’ ಅಂತ. ಈ ಮಾತಿನ ಅರ್ಥ- ದಲಿತ ನೌಕರ ತಾನು ತನ್ನ ಕುಟುಂಬ ಎಂದಾಗಿ ಬಿಟ್ಟ. ತಾನು ತನ್ನ ಸಮುದಾಯ ಎಂದಾಗಲಿಲ್ಲ. ಇತರರ ಮಾತು ಬೇರೆ, ಆದರೆ ಅವಮಾನ ಬಡತನದಿಂದ ಮೈತಳೆದು@ ವಿದ್ಯಾವಂತನಾಗಿ ಕಣ್ಣುಬಿಟ್ಟವನು, ತನ್ನ ಸಮುದಾಯದ ಕಡೆಗೆ ತಿಂಗಳಲ್ಲಿ ಕೇವಲ ಒಂದು ದಿನವಾದರೂ ನೋಡಬೇಕಿತ್ತು. ದಲಿತ ನೌಕರರ ಕೇವಲ ಒಂದು ದಿನದ ಸಂಬಳದಲ್ಲಿ ತಾವು ಹುಟ್ಟಿಬಂದ ಸಮುದಾಯದ ಇಡೀ ಮಕ್ಕಳ ಶಿಕ್ಷಣ ವಹಿಸಿಕೊಳ್ಳಬಹುದಿತ್ತು. ಅಥವಾ ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಈ ಭೂಮಿ ಮೇಲೆ ಅತ್ಯಂತ ಅವಮಾನಿತರು ಕೊರಗರು. ಇವರಿರುವುದು ಕೇವಲ ಇಪ್ಪತ್ತೆರಡು ಸಾವಿರ. ಇವರನ್ನು ಇಡಿಯಾಗಿ ದತ್ತು ತೆಗೆದುಕೊಂಡು ಕೊರಗರ ಕಣ್ಣೀರು ಒರೆಸಬಹುದಿತ್ತು. ಈ ದಿಕ್ಕಲ್ಲಿ ನಡೆಯಲಿಲ್ಲ. ಇಂಥ ಸಮಸ್ಯೆಗಳನ್ನು ದಲಿತ ನೌಕರರು ತನ್ನ ಸ್ವಂತದ್ದು ಅಂದುಕೊಳ್ಳಲಿಲ್ಲ. ಸಂಘಟಿತರೂ ಆಗಲಿಲ್ಲ. ರಚನಾತ್ಮಕವೂ ಆಗಲಿಲ್ಲ.
ಇಂದು ದಲಿತ ನೌಕರರ ಒಕ್ಕೂಟ ಚಿಗುರುವ ಪ್ರಯತ್ನದಲ್ಲಿದೆ. ಇಲ್ಲಿರುವ ಬಹುತೇಕ ದಲಿತ ನೌಕರರು ದಲಿತ ಸಂಘರ್ಷ ಸಮಿತಿಯು ಹುಟ್ಟಿದ ಕಾಲದಲ್ಲಿ ಕೆಲಸಕ್ಕೆ ಸೇರಿದವರಾಗಿದ್ದು, ಈಗ ನಿವೃತ್ತಿ ಹತ್ತಿರ ನಿಂತಿದ್ದಾರೆ. ಇವರು ದಸಂಸ ಆಂದೋಲನದ ಒಡನಾಟದಲ್ಲಿದ್ದವರು ಎಂಬ ಕಾರಣಕ್ಕಾಗಿ ಸ್ವಲ್ಪ ಕಟುವಾಗಿಯೇ ಹೇಳುವೆ. ದಲಿತ ನೌಕರರ ಜೀವನ ಚರಿತ್ರೆಯನ್ನು ಒಂದೇ ವಾಕ್ಯದಲ್ಲಿ ಬರೆಯಿರಿ ಎಂದರೆ ಏನನ್ನು ಬರೆಯಬಹುದು?- `ಬಡತನದಲ್ಲಿ ಕಷ್ಟಪಟ್ಟು ಓದಿ ವಿದ್ಯಾವಂತನಾಗಿ ಕೆಲಸಕ್ಕೆ ಸೇರಿ ಸಂಬಳ ತೆಗೆದುಕೊಂಡು ಆಮೇಲೆ ಊಟ ಮಾಡಿಕೊಂಡು ಚೆನ್ನಾಗಿ ಸತ್ತ’- ಬಹುತೇಕರದು ಇಷ್ಟೆ ಅಲ್ಲವೆ? ಇದಾಗದಿರಲಿ. ನಾಳೆಯಲ್ಲ, ಇಂದಿನಿಂದಲೇ ದಲಿತ ನೌಕರರ ಒಕ್ಕೂಟವು ನೊಂದವರ ಕಣ್ಣೀರು ಒರೆಸುವ ಸಂಘಟನೆಯಾಗಲಿ, ಉಳಿಯಲಿ.
ಇತ್ತೀಚೆಗೆ ಎರಡು ವಿದ್ಯಮಾನಗಳು ಜರುಗಿವೆ. ಮೊದಲನೆಯದು ದಲಿತರು ಬೌದ್ಧಧರ್ಮದ ಕಡೆಗೆ. ಇನ್ನೊಂದು ಹಿಂದೂ ಸಮಾಜೋತ್ಸವ. ಈ ಹಿಂದೂ ಸಮಾಜೋತ್ಸವವನ್ನು ಎಚ್ಚೆತ್ತ ಎಲ್ಲರೂ ಗುಮಾನಿಯಿಂದ ನೋಡಬೇಕಾಗಿದೆ. ಈ ಸಂಬಂಧ ಶ್ರೀ ಮುರುಘರಾಜೇಂದ್ರ ಶರಣರಿಗೆ ಒಂದು ಪತ್ರ ಬರೆದಿದ್ದೆ. ಅದರಲ್ಲಿ ಹೀಗೆ ಬರೆದಿದ್ದೆ: ‘ಹಿಂದೆ ಇಡೀ ಸಮಾಜವನ್ನು ಬ್ರಾಹ್ಮಣ ಮಠಗಳು ಪ್ರತಿನಿಧಿಸುತ್ತಿದ್ದವು. ಇತ್ತೀಚೆಗೆ ಮಧ್ಯಮ ಜಾತಿಗಳ ಮಠಗಳು ಪ್ರಬಲಗೊಂಡು ಬಹುಸಂಖ್ಯಾತ ಜನ ಈ ಮಠಗಳಿಗೆ ನಡೆದುಕೊಳ್ಳುತ್ತಿರುವುದರಿಂದ ಬ್ರಾಹ್ಮಣ ಮಠಗಳ ಅಹಂಗೆ ಪೆಟ್ಟು ಬೀಳುತ್ತಿದೆ ಎನ್ನಿಸುತ್ತದೆ. ಅದಕ್ಕಾಗಿ ಬ್ರಾಹ್ಮಣ ಮಠಗಳ ಅಹಂಗೆ, ಇಡೀ ಸಮಾಜವನ್ನು ತಾನು ಮಾತ್ರವೇ ಪ್ರತಿನಿಧಿಸಬೇಕೆಂಬ ಮೇಲರಿಮೆ ಹುನ್ನಾರವಾಗಿ ಭಜರಂಗದಳ ಸಂಘ ಪರಿವಾರಕ್ಕೆ ಆಶೀರ್ವಾದ ಮಾಡುತ್ತಿರುವಂತೆ ಕಾಣುತ್ತಿದೆ. ಹಿಂದುತ್ವ ಪರಿಕಲ್ಪನೆ ಪ್ರಾಬಲ್ಯವಾದರೆ ಭಾರತದ ನೂರಾರು ಧರ್ಮಗಳು ಸಾವಿರಾರು ಸಂಪ್ರದಾಯಗಳು ತಂತಾನೆ ನಾಶವಾಗುವುದರಿಂದ ಮತ್ತೆ ಬ್ರಾಹ್ಮಣಶಾಹಿ ತನ್ನ ಮೇಲರಿಮೆ ಕಾಪಾಡಿಕೊಳ್ಳುವುದರ ಹವಣಿಕೆಯಾಗಿ ಇದು ನನಗೆ ಕಾಣಿಸುತ್ತದೆ. ಶ್ರೀ ಪೇಜಾವರರ ಚಲನವಲನಗಳೂ ನನಗೆ ಹೀಗೆ ಅನ್ನಿಸಲು ಕಾರಣವಾಯ್ತು.’
ಈ ಹಿಂದೂ ಸಮಾಜೋತ್ಸವದ ಆಳದಲ್ಲಿ ಇರುವುದಾದರೂ ಏನು? ಈ ಹಿಂದು ಜಾತಿ ಸಮಾಜದೊಳಗೆ ಉಣ್ಣಲ್ಲ, ಉಡಲ್ಲ, ಮಠಾಧಿಪತಿಯಂತು ಆಯಾಯ ಜಾತಿ ಬಿಟ್ಟು ಬೇರೆ ಜಾತಿಯವರು ಆಗಲ್ಲ. ಭಾರತದಲ್ಲಿ ಜಾತಿಗಳ ಒಳಗೆ ಏಕರೂಪ ಕಾನೂನು ಕಟ್ಟಳೆಗಳು ಇವೆ. ಆದರೆ ಹಿಂದೂಧರ್ಮಕ್ಕೆ ಅಂತ, ಆ ಧರ್ಮಕ್ಕೆ ಸೇರಿದವರಿಗಾಗಿ ಒಂದು ಅಂತ ಯಾವ ಕಾನೂನು ಕಟ್ಟಳೆಗಳೂ ಇಲ್ಲ. ಇಲ್ಲಿ ಇರುವುದೇ ಮೇಲು ಕೀಳು ಭಿನ್ನ ಭೇದದ ಜಾತಿ ಕಟ್ಟಳೆಗಳು. ಹೀಗಿರುವಾಗ ಮತಾಂತರ ಬೇಡ ಅನ್ನುವವರು ಹೊಟ್ಟೆಗೆ ಏನು ತಿಂತಾರೆ? ನನಗಂತು ಅರ್ಥ ಆಗ್ತ ಇಲ್ಲ. ಜಾತಿ ಪದ್ಧತಿಯ ಮೇಲು-ಕೀಳುಗಳನ್ನು ಉಳಿಸಿಕೊಳ್ಳುವುದಕ್ಕೆ ದೇವರು ಧರ್ಮವನ್ನೆ ರೌಡಿಗಳನ್ನಾಗಿಸಿ ಬಳಸಿಕೊಂಡ ಅಧಃಪತನದ ಸಮಾಜ ನಮ್ಮದು. ಈಗ ಅದೇ ದೇವರು ಧರ್ಮ ಬಳಸಿಕೊಂಡು ಅಧಿಕಾರ ಹಿಡಿಯುವ ಹುನ್ನಾರ ನಡೆಯುತ್ತಿದೆ. ಅದಕ್ಕೆ ವಾತಾವರಣ ನಿರ್ಮಿಸುತ್ತಿರುವ ಶ್ರೀ ಪೇಜಾವರರು, ಶ್ರೀರಾಮಕೃಷ್ಣಾಶ್ರಮದ ಸ್ವಾಮೀಜಿ, ಶ್ರೀ ರವಿಶಂಕರ್, ಶ್ರೀ ಆದಿಚುಂಚನಗಿರಿ ಸ್ವಾಮೀಜಿ ಇವರುಗಳು- ‘ಅಧಿಕಾರಕ್ಕಾಗಿ ಹಣಕ್ಕಾಗಿ ಧರ್ಮದೇವರು ಬಳಸಿ ಪಾಪಿಷ್ಟರಾಗಬೇಡಿ’ ಎಂದು ಜನ ಸಮುದಾಯಕ್ಕೆ ಹೇಳಬೇಕಾದವರು. ಆದರೆ ಇವರೇ ಮುಂದಾಳ್ತನ ವಹಿಸಿ ತಾವೇ ಪಾಪಿಷ್ಟರಾಗಿಬಿಟ್ಟರು. ಶ್ರೀ ಆದಿಚುಂಚನಗಿರಿ ಸ್ವಾಮೀಜಿ, ಹೊಸಬರು-ಹೋಗಲಿ. ಶ್ರೀ ರವಿಶಂಕರ್ ಧ್ಯಾನಿ ಅಂತೆ! ಅಂದರೆ ಎಲ್ಲಾ ಕೊಳಕಿಂದ ಅತೀತರಾಗಬೇಕಾದವರು, ಇವರೇಕೆ ಕೊಳಕಿಗೆ ಬಿದ್ದರು? ಎಲ್ಲಾ ಧರ್ಮಗಳ ಸತ್ವ ಕೂಡಿಸಿದ್ದ, ಕೂಡಿಸಲು ದನದ ಮಾಂಸವನ್ನೂ ತಿಂದ ಪರಮಹಂಸರ ಪರಂಪರೆಯ ರಾಮಕೃಷ್ಣ ಆಶ್ರಮದ ಸ್ವಾಮೀಜಿಯವರು ಪರಮಹಂಸರನ್ನೇ ತಿಥಿ ಮಾಡಿ ಊಟ ಮಾಡಿಬಿಟ್ಟರು! ಹೀಗಾಗಬಾರದಿತ್ತು.
ಯಾವುದೇ ಧರ್ಮವನ್ನು ಅಧಿಕಾರಕ್ಕೆ ಹಣಕ್ಕೆ ದುರುಪಯೋಗಪಡಿಸಿಕೊಂಡರೆ ಏನಾಗುತ್ತದೆ? ಅದರ ಜೀವ ತೆಗೆದು ಹೆಣ ಮಾಡಿದಂತಾಗುತ್ತದೆ, ಅಷ್ಟೆ. ಅದಕ್ಕೇ ನನಗೆ ಹಿಂದೂ ಸಮಾಜೋತ್ಸವ ಅಂದರೆ ಅಲ್ಲಿ ಹಿಂದೂ ಧರ್ಮಗಳ ಜೀವ ತೆಗೆದು ಹೆಣ ಮಾಡಿ ಚಟ್ಟದಲ್ಲಿ ಅಲಂಕೃತವಾಗಿ ಕೂಡಿಸಿ ಆ ಚಟ್ಟವನ್ನು ಈ ನಾಲ್ವರು ಅಂದರೆ ಶ್ರೀ ಪೇಜಾವರರು, ರಾಮಕೃಷ್ಣಾಶ್ರಮದ ಸ್ವಾಮೀಜಿ, ಶ್ರೀ ರವಿಶಂಕರ್, ಶ್ರೀ ಆದಿಚುಂಚನಗಿರಿ ಸ್ವಾಮೀಜಿ ಆ ಹೆಣ ಹೊತ್ತುಕೊಂಡು ಹೊರಟ ಮೆರವಣಿಗೆ ಎಂಬಂತೆ ಕಾಣಿಸುತ್ತದೆ.
ಇದನ್ನು ಇಲ್ಲಿ ಯಾಕೆ ಹೇಳುತ್ತಿದ್ದೇನೆ ಅಂದರೆ- ದಲಿತರು ಬುದ್ಧನನ್ನು ಮುಟ್ಟುತ್ತಿದ್ದಾರೆ. ಯಾವ ಕಾರಣಕ್ಕೂ ಧರ್ಮವನ್ನು, ಬುದ್ಧನನ್ನು ಅಧಿಕಾರ-ಹಣಕ್ಕೆ ಅವರಂತೆ ನಾವೂ ದುರುಪಯೋಗಿಸಿಕೊಂಡು ಪಾಪಿಷ್ಟರಾಗುವುದು ಬೇಡ ಎಂಬ ಎಚ್ಚರಿಕೆ ಸದಾ ನಮಗಿರಲಿ. ರಾಮನನ್ನು ಸಾಯಿಸಿದ ಗತಿ ಬುದ್ಧನಿಗೆ ಬಾರದಿರಲಿ. ಧರ್ಮ ಬೀದಿಗೆ ಬೀಳದಿರಲಿ, ಅಂತರಂಗದೊಳಗೆ ವಾಸಿಸಲಿ. ಜೊತೆಗೆ ನಮಗೆ ತಿಳಿದಿರಲಿ- ಬುದ್ಧ, ಜೀಸಸ್, ವಚನಕಾರರು, ಪರಮಹಂಸ ಥರದವರು ಅವರವರ ರೂಢಿಗತ ಧರ್ಮಕ್ಕೂ ಅತೀತರು. ಬುದ್ಧನಿಗೂ ಪಗೋಡಕ್ಕೂ, ಜೀಸಸ್‍ಗೂ ಚರ್ಚ್‍ಗೂ, ವಚನಕಾರರಿಗೂ ಮಠಗಳಿಗೂ, ಪರಮಹಂಸರಿಗೂ ಆಶ್ರಮಕ್ಕೂ ಸಂಬಂಧ ಕಲ್ಪಿಸಬಾರದು. ಅವರು ಸೆರೆ ಮಾಡಲಾಗದ ಕಾಣ್ಕೆಗಳು.

