लाइव कैलेंडर

March 2026
M T W T F S S
 1
2345678
9101112131415
16171819202122
23242526272829
3031  
09/03/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಕೌಟುಂಬಿಕ ಸಂಘರ್ಷ……… ಕುಟುಂಬದ ಘರ್ಷಣೆಗಳು ಟಿವಿ ಮಾಧ್ಯಮಗಳಲ್ಲಿ ಪ್ರಚಾರವಾಗುವುದರಿಂದ ಪರಿಹಾರ ಸಾಧ್ಯವೇ…

1 min read

ಕೌಟುಂಬಿಕ ಸಂಘರ್ಷ………

ಕುಟುಂಬದ ಘರ್ಷಣೆಗಳು ಟಿವಿ ಮಾಧ್ಯಮಗಳಲ್ಲಿ ಪ್ರಚಾರವಾಗುವುದರಿಂದ ಪರಿಹಾರ ಸಾಧ್ಯವೇ. ಅವರಿಗೆ ಅಷ್ಟು ಜ್ಞಾನ ಮತ್ತು ಸಾಮರ್ಥ್ಯ ಇದೆಯೇ….

ಕೌಟುಂಬಿಕ ಸಮಸ್ಯೆಗಳಿಗೆ, ಸಂಘರ್ಷಗಳಿಗೆ, ಮನಸ್ತಾಪಗಳಿಗೆ, ಜಂಜಾಟಗಳಿಗೆ, ಜಗಳಗಳಿಗೆ, ಹೊಡೆದಾಟಗಳಿಗೆ ದಯವಿಟ್ಟು ಮಾಧ್ಯಮಗಳಲ್ಲಿ ಪರಿಹಾರ ಕಂಡುಕೊಳ್ಳುವ ಮನಸ್ಥಿತಿಯನ್ನು ಬಿಟ್ಟುಬಿಡಿ ಅಥವಾ ಮಾಧ್ಯಮಗಳ ಮುಖಾಂತರ ನಿಮ್ಮ ವಿರೋಧಿಗಳನ್ನು, ಶತ್ರುಗಳನ್ನು, ನೀವು ದ್ವೇಷಿಸುವವರನ್ನು, ನಿಮಗೆ ಅನ್ಯಾಯ ಮಾಡಿದವರನ್ನು, ನಿಮ್ಮ ಮೇಲೆ ದೌರ್ಜನ್ಯ ಮಾಡಿರುವವರನ್ನು ಶಿಕ್ಷಿಸಬಹುದು, ಅವಮಾನಿಸಬಹುದು, ನ್ಯಾಯ ಪಡೆಯಬಹುದು ಎಂಬ ಅಭಿಪ್ರಾಯ ಇದ್ದರೆ ಅದು ಅಂತಹ ಒಳ್ಳೆಯ ಆಲೋಚನೆಯಲ್ಲ.

ಏಕೆಂದರೆ ನಿಮ್ಮ ವಿರುದ್ಧ ಇರುವವರು ಸಹ ಅದೇ ಮಾಧ್ಯಮಗಳನ್ನು ಉಪಯೋಗಿಸಿಕೊಂಡು ನಿಮ್ಮ ಬಗ್ಗೆ ಅದೇ ರೀತಿಯ ಪ್ರತ್ಯುತ್ತರ ಕೊಡುತ್ತಾರೆ. ಹೆಚ್ಚು ಕಡಿಮೆ ಮನೆಯಲ್ಲಿ ನಡೆದ ಜಗಳ ಬೀದಿರಂಪವಾಗಿ, ಮಾಧ್ಯಮಗಳ ಮುಖಾಂತರ ಇಡೀ ರಾಜ್ಯ ನೋಡುವಂತಾಗುತ್ತದೆ. ಅದರಿಂದ ಅಂತಹ ಯಾವ ಒಳ್ಳೆಯ ಪ್ರಯೋಜನವೂ ಇಲ್ಲ. ನಿಮ್ಮ ಸಮಸ್ಯೆ ಪರಿಹಾರ ಆಗುವ ಬದಲು ಮತ್ತಷ್ಟು ದೊಡ್ಡದಾಗುತ್ತದೆ. ಪೊಲೀಸರಿಗೆ ದೂರು ಕೊಟ್ಟು ಅಲ್ಲಿ ಸಾಧ್ಯವಾದರೆ ಹೊಂದಾಣಿಕೆಗೆ ಪ್ರಯತ್ನಿಸಿ. ಅದು ಸಾಧ್ಯವಾಗದಿದ್ದರೆ ನ್ಯಾಯಾಲಯಗಳಿಗೆ ಹೋಗುವುದು ಎಲ್ಲಾ ರೀತಿಯಲ್ಲೂ ನಾಗರೀಕ ಸಮಾಜದ ಅತ್ಯುತ್ತಮ ಮಾರ್ಗ.

ಒಂದು ವೇಳೆ ಕೌಟುಂಬಿಕ ಸಮಸ್ಯೆಗಳು ಮುಂದೆ ಪರಿಹಾರವಾಗಿ, ನಂತರ ಘಟನೆಯ ಬಗ್ಗೆ ಪಶ್ಚಾತಾಪವಾಗಿ, ಮತ್ತೆ ಸಂಬಂಧಗಳು ಬೆಸೆಯುವ ಅವಕಾಶಗಳಿರುತ್ತವೆ, ಅದು ಮನೆಗೆ ಸೀಮಿತವಾಗಿದ್ದಾಗ ಮಾತ್ರ. ಅದನ್ನು ಮೀರಿ ಟಿವಿ ಮಾಧ್ಯಮಗಳಲ್ಲಿ ಬಹಿರಂಗವಾದಾಗ ಮತ್ತೆ ಬೆಸೆಯುವ ಪ್ರಕ್ರಿಯೆಯು ತುಂಬಾ ಕಷ್ಟವಾಗಬಹುದು.

ಈ ಕೌಟುಂಬಿಕ ಸಂಘರ್ಷಗಳು ಆಧುನಿಕ ಜೀವನ ಶೈಲಿಯ ಒಂದು ಅನಿವಾರ್ಯ ಭಾಗವಾಗಿದೆ. ಎಲ್ಲೋ ಕೆಲವು ಅತ್ಯುತ್ತಮ ಮಾದರಿ, ಆದರ್ಶ ಕುಟುಂಬಗಳನ್ನು ಹೊರತುಪಡಿಸಿದರೆ ಬಹುತೇಕ ಕುಟುಂಬಗಳಲ್ಲಿ ಈ ರೀತಿಯ ಸಮಸ್ಯೆಗಳು ಬೇರೆ ಬೇರೆ ರೂಪದಲ್ಲಿ ಪ್ರಕಟವಾಗುತ್ತದೆ. ಅದು ಕಡುಬಡವರಿಂದ ದೊಡ್ಡ ಶ್ರೀಮಂತರವರೆಗೆ, ಸಿನಿಮಾ ನಟರಿಂದ ವಿಜ್ಞಾನಿಗಳವರಿಗೆ, ಸಾಹಿತಿಗಳಿಂದ ಸ್ವಾಮೀಜಿಗಳವರೆಗೆ ಯಾರನ್ನೂ ಬಿಟ್ಟಿಲ್ಲ. ಇದು ಒಂದು ಸಾಮಾಜಿಕ ಪರಿವರ್ತನೆಯ ಸಂದರ್ಭದಲ್ಲಿ ಇಡೀ ಸಮಾಜ ಅನುಭವಿಸಬೇಕಾದ ಅನಿವಾರ್ಯ ಪರಿಸ್ಥಿತಿ.

ಹಣ ಕೇಂದ್ರೀಕೃತ ಸಮಾಜವನ್ನು ನಿರ್ಮಿಸಿ, ಜಮೀನು, ಅಧಿಕಾರ, ಬಂಗಾರ ಇತ್ಯಾದಿ ಆಸ್ತಿ, ಅಂತಸ್ತುಗಳೇ ಪ್ರಧಾನವಾಗಿರುವ ಸಾಮಾಜಿಕ ವ್ಯವಸ್ಥೆ ರೂಪಗೊಂಡಿರುವಾಗ, ಜೊತೆಗೆ ಮಹಿಳಾ ಸ್ವಾತಂತ್ರ್ಯ, ಸಮಾನತೆ, ಸ್ವಾವಲಂಬನೆ, ಸಮಾನ ಆಸಕ್ತಿಯ ಹಕ್ಕು ಸಮಾಜದಲ್ಲಿ ಗಟ್ಟಿಯಾಗಿ ಬೇರೂರುತ್ತಿರುವಾಗ, ಸಹಜವಾಗಿಯೇ ಪುರುಷ ಮತ್ತು ಮಹಿಳೆಯರು ಹಾಗೂ ಅಕ್ಕ-ತಂಗಿ, ಅಣ್ಣ ತಮ್ಮ, ಅಪ್ಪ ಮಕ್ಕಳ ನಡುವೆ ಸಂಘರ್ಷ ನಡೆದೇ ನಡೆಯುತ್ತದೆ. ಇದಕ್ಕೆ ನಾವ್ಯಾರು ಹೊರತಲ್ಲ.

ಆದರೆ ಇದು ನಿರಂತರ ಮತ್ತು ಶಾಶ್ವತವೇನು ಅಲ್ಲ. ಈ ಸಾಮಾಜಿಕ ಪರಿವರ್ತನೆ ಒಂದು ಹಂತಕ್ಕೆ ಬಂದ ನಂತರ, ಪುರುಷ ಮನಸ್ಥಿತಿ ಮಹಿಳಾ ಸಮಾನತೆಯ ಅನಿವಾರ್ಯತೆ ಮತ್ತು ವಾಸ್ತವವನ್ನು ಒಪ್ಪಿಕೊಂಡ ನಂತರ, ಹಣ, ಜಮೀನಿಗಿಂತ ಮನುಷ್ಯ ಸಂಬಂಧಗಳು ಮುಖ್ಯ ಎಂಬ ಭಾವನೆ ಸಮಾಜದಲ್ಲಿ ಮರು ಸ್ಥಾಪನೆಯಾದ ಬಳಿಕ ಸಹಜವಾಗಿಯೇ ಈ ಪರಿಸ್ಥಿತಿ ಮತ್ತೊಂದು ಹಂತ ತಲುಪಿ ಪರಿಸ್ಥಿತಿ ಬದಲಾಗಬಹುದು.

ಈ ವಿಷಯದಲ್ಲಿ ಮಾಧ್ಯಮಗಳು ಸಹ ವಿವೇಚನೆಯುಕ್ತವಾಗಿ ವರ್ತಿಸಿ ಈ ರೀತಿಯ ಖಾಸಗಿ ಗಲಾಟೆಗಳನ್ನು ದಯವಿಟ್ಟು ಪ್ರಸಾರ ಮಾಡಬೇಡಿ, ಪ್ರಚಾರ ಕೊಡಬೇಡಿ. ತೀರಾ ಹಿಂಸಾತ್ಮಕ, ದೌರ್ಜನ್ಯದ ಘಟನೆಗಳಿದ್ದಾಗ ಮಾತ್ರ ಸುದ್ದಿಯಾಗಿಸಿ. ಕುಟುಂಬಗಳ ನಡುವಿನ ನಿರ್ಧಿಷ್ಟವಾಗಿ ಗಂಡ ಹೆಂಡತಿ, ಅಪ್ಪ ಮಕ್ಕಳು, ಅಣ್ಣ ತಂಗಿ, ಅಕ್ಕ ತಮ್ಮ ಈ ರೀತಿಯ ಸಂಬಂಧಗಳ ಜಗಳಗಳಿಗೆ ಮಾನ್ಯತೆ ನೀಡಬೇಡಿ. ಅನಾವಶ್ಯಕವಾಗಿ ಟಿವಿಯಲ್ಲಿ ಒಬ್ಬರ ಮೇಲೆ ಒಬ್ಬರು ಆರೋಪ ಮಾಡಿಕೊಂಡು, ಅದಕ್ಕೆ ಅವರ ಸಂಬಂಧಿಕರು ಮತ್ತಷ್ಟು ತುಪ್ಪ ಸುರಿದು ಸಾಧನೆ ಮಾಡುವುದೇನು ಇರುವುದಿಲ್ಲ.

ಕೆಲವು ಮನಸ್ಸುಗಳು ಉದ್ವಿಗ್ನವಾಗಿದ್ದಾಗ, ಅಸಮಾಧಾನ, ಅಸಹಿಷ್ಣುತೆ ಇದ್ದಾಗ ಸಹಜವಾಗಿಯೇ ಎಲ್ಲರ ಮೇಲೆಯೂ ಕೋಪ ಬರುತ್ತದೆ. ಆ ಕೋಪದ ಭರದಲ್ಲಿ ಏನೇನೋ ಮಾತನಾಡುತ್ತಾರೆ. ಇನ್ನೂ ಕೆಲವರಿಗೆ ಮನಸ್ಸಿನ ಮೇಲೆ ನಿಯಂತ್ರಣವೇ ಇರುವುದಿಲ್ಲ, ಮುಂಗೋಪಿಗಳಾಗಿರುತ್ತಾರೆ, ತಕ್ಷಣಕ್ಕೆ ಪ್ರತಿಕ್ರಿಸುತ್ತಾರೆ. ನಂತರ ಪಶ್ಚಾತಾಪ ಪಡುತ್ತಾರೆ. ಎಷ್ಟೋ ಈ ರೀತಿಯ ಸಂಘರ್ಷಗಳು ಕಾಲಾ ನಂತರದಲ್ಲಿ ಒಂದುಗೂಡಿರುವುದನ್ನು ಕಾಣುತ್ತಿದ್ದೇವೆ.

ಇತ್ತೀಚೆಗಷ್ಟೇ ಇಬ್ಬರು ಗಂಡ ಹೆಂಡತಿ ಸಿಕ್ಕಾಪಟ್ಟೆ ಜಗಳಾಡಿ, ಬೇರೆ ಬೇರೆ ಹೋಗಿ, ಆಕೆ ಬೇರೆಯವರ ಜೊತೆ ವಾಸಿಸತೊಡಗಿ, ಈತ ಆತನನ್ನು ಹೊಡೆದು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಯಿತು. ಇಷ್ಟೆಲ್ಲಾ ಆದ ನಂತರವೂ ಕೆಲವೇ ತಿಂಗಳುಗಳಲ್ಲಿ ಇಬ್ಬರೂ ಒಂದಾದರು. ಅದನ್ನು ಇದೇ ಮಾಧ್ಯಮಗಳು ದಿನಗಟ್ಟಲೆ ಚರ್ಚಿಸಿದವು. ಹೀಗೆ ನಮ್ಮ ಕಣ್ಣ ಮುಂದೆ ಅನೇಕ ಘಟನೆಗಳು ನಡೆಯುತ್ತಿವೆ. ಇಷ್ಟೆಲ್ಲ ಅರಿವಿದ್ದು ಕೌಟುಂಬಿಕ ಘಟನೆಗಳ ವಿಷಯದಲ್ಲಿ ಮಾಧ್ಯಮಗಳು ಮೂಗು ತೂರಿಸುವುದು ಖಂಡಿತ ಅನಾಗರಿಕ ವರ್ತನೆ.

ಮನೆ ಜಗಳಗಳನ್ನು ಟಿವಿಯಲ್ಲಿ ಕುಳಿತು ಸಿನಿಮಾ ಧಾರವಾಹಿಯಂತೆ ನೋಡುವುದು, ಕುತೂಹಲದಿಂದ ಆ ಬಗ್ಗೆ ಚರ್ಚಿಸುವುದು ಮನುಷ್ಯ ಸಹಜ ಗುಣ. ಆದರೆ ಅದರ ಮೇಲೆ ನಿಯಂತ್ರಣ ಸಾಧಿಸಬೇಕಾದದ್ದು ಸಹ ಅಷ್ಟೇ ಅವಶ್ಯಕತೆ ಇದೆ. ಜನರು ಜಾಗೃತರಾಗಬೇಕು. ಕೌಟುಂಬಿಕ ವ್ಯವಸ್ಥೆಯಲ್ಲಿ ನಡೆಯುವ ಸಂಘರ್ಷಗಳು ವೈಯಕ್ತಿಕ ಎಂದು ಭಾವಿಸದೆ ಇದೊಂದು ಸಾರ್ವತ್ರಿಕ, ಸಾಮಾಜಿಕ ಸಮಸ್ಯೆ. ಇದನ್ನು ಆದಷ್ಟು ಪ್ರಬುದ್ಧತೆಯಿಂದ ನಿರ್ವಹಿಸಿದರೆ, ನಮ್ಮ ಪ್ರತಿಕ್ರಿಯೆಗಳು ಸಂಯಮದಿಂದ ಇದ್ದರೆ ಖಂಡಿತ ಕುಟುಂಬ ವ್ಯವಸ್ಥೆ ಹಿತಕರವಾಗಿರುತ್ತದೆ, ಸಹನೀಯವಾಗಿರುತ್ತದೆ.

ಯಾರ್ಯಾರಿಗೆ ಎಷ್ಟೆಷ್ಟು ಸಾಧ್ಯವೋ ಅಷ್ಟಷ್ಟು ಸಂಯಮ ವಹಿಸಿ ಕೌಟುಂಬಿಕ ನೆಮ್ಮದಿಯನ್ನು ಕಾಪಾಡಿಕೊಳ್ಳಿ. ಇದು ಇಂದಿನ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ತೀರಾ ಅನಿವಾರ್ಯ. ಇಲ್ಲದಿದ್ದರೆ ಒತ್ತಡದಿಂದ ನೀವೇ ಕುಸಿಯುವಿರಿ. ಪೋಲೀಸ್ ಮತ್ತು ನ್ಯಾಯಾಲಯಗಳು ನಿಮ್ಮ ಅಂತಿಮ ಆಯ್ಕೆಗಳಾಗಲಿ. ಹಿತೈಷಿಗಳ ಹೆಸರಿನಲ್ಲಿ ನಮ್ಮನ್ನು ಪ್ರಚೋದಿಸಿ, ತಪ್ಪು, ಕೆಟ್ಟ, ಅಪ್ರಬುದ್ಧ ಸಲಹೆ ನೀಡುವವರ ಬಗ್ಗೆ ಸದಾ ಎಚ್ಚರವಿರಲಿ……

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.
9663750451….
9844013068……

About Author

Leave a Reply

Your email address will not be published. Required fields are marked *

You may have missed