ಕೆಪಿಎಸ್-ಮ್ಯಾಗ್ನೆಟ್ ಯೋಜನೆ ಹೆಸರಿನಲ್ಲಿ ಸರ್ಕಾರ 40 ಸಾವಿರಕ್ಕೂ ಅಧಿಕ ಸರ್ಕಾರಿ ಶಾಲೆಗಳನ್ನು ಮುಚ್ಚಲು ಮುಂದಾಗಿದೆ….
1 min read
ಸರ್ಕಾರಿ ಶಾಲೆ ಮುಚ್ಚುವ ಸರ್ಕಾರದ ನಿರ್ಧಾರದ
ವಿರುದ್ಧ ರಾಜ್ಯಾದ್ಯಂತ ಹೋರಾಟ
ಚಿಕ್ಕಮಗಳೂರು: ಗ್ರಾಮಗಳಿಗೆ ಸಾಮಾಜಿಕ,
ಸಾಂಸ್ಕೃತಿಕ ಅಸ್ತಿತ್ವದ ಭಾಗವಾಗಿರುವ ಸರ್ಕಾರಿ ಶಾಲೆಗಳನ್ನು ಕೆಪಿ-ಎಸ್-ಮ್ಯಾಗ್ನೆಟ್ ಯೋಜನೆಯ ಹೆಸರಿನಲ್ಲಿ ಶಿಕ್ಷಣ ಹಕ್ಕು ಕಾಯ್ದೆ ವಿರುದ್ಧವಾಗಿ ಸರ್ಕಾರ ಮುಚ್ಚಲು ಮುಂದಾಗಿರುವುದನ್ನು ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಪೂಡೆಂಟ್ಸ್ ಆರ್ಗನೈಜೇಷನ್ ರಾಜ್ಯ ಸಮಿತಿ ಖಜಾಂಚಿ ಸುಭಾಷ್ ಖಂಡಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಒಂದೇ ಒಂದು ಸರ್ಕಾರಿ ಶಾಲೆಯನ್ನು ಮುಚ್ಚುವುದಿಲ್ಲ ಎಂದು ಸ್ಪಷ್ಟನೆ ನೀಡಿ ಶಿಕ್ಷಣ ಹಾಗೂ ಸಾಕ್ಷರತಾ ಸಚಿವರು ಇದೇ ಮಾತನ್ನು ಪುನರುಚ್ಚರಿಸಿದ್ದಾರೆ. ಈ ಹೇಳಿಕೆಯ ಬಗ್ಗೆ ಸತ್ಯಾಸತ್ಯತೆಯನ್ನು ಸರ್ಕಾರದ ದಾಖಲೆಗಳ ಆಧಾರದಲ್ಲಿ ಪರಿಶೀಲಿಸಿ ವಾಸ್ತವಾಂಶವನ್ನು ಜನರ ಮುಂದಿಡಲು ರಾಜ್ಯಾದ್ಯಂತ ಹೋರಾಟ ರೂಪಿಸಲು ನಿರ್ಧರಿಸಲಾಗಿದೆ ಎಂದರು.
ಕೆಪಿಎಸ್-ಮ್ಯಾಗ್ನೆಟ್ ಯೋಜನೆ ಹೆಸರಿನಲ್ಲಿ ಸರ್ಕಾರ 40 ಸಾವಿರಕ್ಕೂ ಅಧಿಕ ಸರ್ಕಾರಿ ಶಾಲೆಗಳನ್ನು ಮುಚ್ಚಲು ಮುಂದಾಗಿದೆ.
ಗ್ರಾ.ಪಂ ಗೆ ಒಂದರಂತೆ 6 ಸಾವಿರ ಕೆಪಿಎಸ್-ಮ್ಯಾಗ್ನೆಟ್ ಶಾಲೆಯನ್ನು ಸ್ಥಾಪಿಸುವ ಗುರಿ ಹೊಂದಿದೆ. ಮೊದಲ ಹಂತದಲ್ಲಿ 800 ಶಾಲೆಗಳನ್ನು ಗುರ್ತಿಸಲಾಗಿದ್ದು, ಗಣಿ ಬಾಧಿತ ಜಿಲ್ಲೆಗಳಲ್ಲಿ 100, ಕರ್ನಾಟಕದ ಜಿಲ್ಲೆಗಳಲ್ಲಿ 200 ಹಾಗೂ ಇತರೆ ಭಾಗಗಳಲ್ಲಿ 500 ಶಾಲೆಗಳನ್ನು ಗುರ್ತಿಸಿ ಸುತ್ತೋಲೆ ಹೊರಡಿಸಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ 1002 ಸರ್ಕಾರಿ ಶಾಲೆಗಳನ್ನು ಮುಚ್ಚಲು ಪಟ್ಟಿ ತಯಾರಿಸಲಾಗಿದ್ದು, ಚಿಕ್ಕಮಗಳೂರು ತಾಲ್ಲೂಕು ಒಂದರಲ್ಲೇ 237 ಸರ್ಕಾರಿ ಶಾಲೆಗಳನ್ನು ವಿಲೀನದ ಹೆಸರಿನಲ್ಲಿ ಮುಚ್ಚಲು ಪಟ್ಟಿಮಾಡಲಾಗಿದೆ. ಉಳಿದ ತಾಲ್ಲೂಕುಗಳಲ್ಲೂ ನೂರಾರು ಶಾಲೆಗಳನ್ನು ಮುಚ್ಚಲು ತಯಾರಿ ನಡೆಸುತ್ತಿದ್ದಾರೆಂದು ದೂರಿದರು.
ವಿಲೀನದ ನೆಪದಲ್ಲಿ ಮುಚ್ಚುವ ಶಾಲಾ ಕಟ್ಟಡಗಳನ್ನು ಅನ್ಯ ಉದ್ದೇಶಕ್ಕೆ ಬಳಸಲು ಸರ್ಕಾರ ಮುಂದಾಗಿದೆ. ಸ್ವಸಹಾಯ ಸಂಘಗಳಿಗೆ ಈ ಕಟ್ಟಡಗಳನ್ನು ನೀಡಲು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವ ಮಧುಬಂಗಾರಪ್ಪ ಅವರು ಹೇಳಿದ್ದು, ಶಾಲೆ ಮುಚ್ಚುವುದಿಲ್ಲ ಎಂದಮೇಲೆ ಅನ್ಯ ಉದ್ದೇಶಕ್ಕೆ ಬಳಸುವ ಔಚಿತ್ಯವೇನು ಎಂದು ಪ್ರಶ್ನಿಸಿದರು.
ದೇಶದಲ್ಲಿ ಶಿಕ್ಷಣಕ್ಕಾಗಿ ಧ್ವನಿ ಎತ್ತಿದ ಮಹಾನ್ ನವೋದಯ ಚಿಂತಕರಾದ ಈಶ್ವರ್ ಚಂದ್ರ ವಿದ್ಯಾಸಾಗರ್, ಜ್ಯೋತಿರಾವ್ ಫುಲೆ, ಸಾವಿತ್ರಿ ಬಾಯಿ ಫುಲೆ, ಸ್ವಾತಂತ್ರ್ಯ ಸಂಗ್ರಾಮದ ಕ್ರಾಂತಿಕಾರಿಗಳಾದ ಭಗತ್ ಸಿಂಗ್, ನೇತಾಜಿ ಸುಭಾಷ್ ಚಂದ್ರಬೋಸ್, ನಾಡಿನ ಹೆಮ್ಮೆಯ ಸಾಹಿತಿಗಳಾದ ಕುವೆಂಪು, ಕುದ್ದುಲ್ ರಂಗರಾವ್, ಪಂಡಿತ್ ತಾರಾನಾಥ್ ಮುಂತಾದ ಮಹನೀಯರ ಆಶಯಗಳಿಗೆ ವಿರುದ್ಧವಾಗಿ ಸರ್ಕಾರ ಶಿಕ್ಷಣದ ಮೇಲೆ ಪ್ರಹಾರ ನಡೆಸಿದೆ ಎಂದು ಆರೋಪಿಸಿದರು.
ಇದರ ವಿರುದ್ಧವಾಗಿ ಪ್ರಬಲ ಹೋರಾಟವನ್ನು ರೂಪಿಸಲು ವಿದ್ಯಾರ್ಥಿಗಳು, ಪಾಲಕರು, ಶಿಕ್ಷಕರು, ಶಿಕ್ಷಣ ಪ್ರೇಮಿಗಳು ಸರ್ಕಾರಿ ಶಾಲೆಗಳನ್ನು ಉಳಿಸುವ ಹೋರಾಟಕ್ಕೆ ಬೆಂಬಲಿಸಬೇಕೆಂದು ಮನವಿ ಮಾಡಿದರು. ಪತ್ರಿಕಾಗೋಷ್ಠಿಯಲ್ಲಿ ಎಐಡಿಎಸ್‌ಓ ಸಂಚಾಲಕಿ ಚೈತ್ರ.ಸಹ ಸಂಚಾಲಕಿ ಶುಷ್ಮ ಇದ್ದರು…

