लाइव कैलेंडर

March 2026
M T W T F S S
 1
2345678
9101112131415
16171819202122
23242526272829
3031  
09/03/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಕಾಲ ಕಳೆಯುವ ಸಮಯ……. ಎಷ್ಟು ಸಮಯ, ಯಾವ ಸ್ಥಳದಲ್ಲಿ ವ್ಯಯಿಸಬೇಕು ಎಂಬ ಒಂದು ಚಿಂತನೆ……

1 min read

ಕಾಲ ಕಳೆಯುವ ಸಮಯ…….

ಎಷ್ಟು ಸಮಯ, ಯಾವ ಸ್ಥಳದಲ್ಲಿ ವ್ಯಯಿಸಬೇಕು ಎಂಬ ಒಂದು ಚಿಂತನೆ……

ಆಸ್ಪತ್ರೆಗಳಲ್ಲಿ ಕಳೆಯುವ ದಿನಗಳು ಸಾಮಾನ್ಯವಾಗಿ ನೋವನ್ನು ಉಂಟುಮಾಡುತ್ತದೆ,
ಆಟದ ಮೈದಾನದಲ್ಲಿ ಕಳೆಯುವ ದಿನಗಳು ಸಾಮಾನ್ಯವಾಗಿ ನಲಿವನ್ನು ಕೊಡುತ್ತದೆ‌……

ಪೋಲೀಸ್ ಸ್ಟೇಷನ್, ಜೈಲು, ನ್ಯಾಯಾಲಯಗಳಲ್ಲಿ ಸವೆಸುವ ಸಮಯ ಯಾವಾಗಲೂ ಕಹಿ ನೆನಪುಗಳನ್ನು ಉಳಿಸುತ್ತದೆ.
ಗ್ರಂಥಾಲಯದಲ್ಲಿ ಸವೆಸುವ ಸಮಯ ಯಾವಾಗಲೂ ಜ್ಞಾನವನ್ನು ವೃದ್ಧಿಸುತ್ತದೆ…..

ಸಾವು, ಸ್ಮಶಾನ, ತಿಥಿಗಳಲ್ಲಿ ಭಾಗವಹಿಸಿದಾಗ ಹೃದಯ ಭಾರವಾಗುತ್ತದೆ.
ಮದುವೆ, ನಾಮಕರಣ, ಗೃಹ ಪ್ರವೇಶ ಕಾರ್ಯಕ್ರಮಗಳಲ್ಲಿ ಭಾಗವಹಿಸಿದಾಗ ಮನಸ್ಸು ಪ್ರಪುಲ್ಲಗೊಳ್ಳುತ್ತದೆ……

ಸಿನಿಮಾ, ನಾಟಕ, ಸರ್ಕಸ್ ಮುಂತಾದ ಸ್ಥಳಗಳು ಭಾವನೆಗಳನ್ನು ಕೆರಳಿಸುತ್ತವೆ,
ದೇವ ಮಂದಿರ ಮಠ ಮಾನ್ಯಗಳು ಭಾವನೆಗಳನ್ನು ನಿಯಂತ್ರಿಸುತ್ತವೆ……

ಐತಿಹಾಸಿಕ ಮತ್ತು ಪೌರಾಣಿಕ ಘಟನೆಗಳು ಕುತೂಹಲ ಮೂಡಿಸುತ್ತದೆ,
ಪ್ರಸ್ತುತ ರಾಜಕೀಯ ಮತ್ತು ಹಿಂಸಾತ್ಮಕ ಘಟನೆಗಳು ಅಸಹ್ಯ ಮತ್ತು ಬೇಸರ ಮೂಡಿಸುತ್ತದೆ…..

ಪ್ರಕೃತಿಯೊಂದಿಗಿನ ಒಡನಾಟ ಜೀವನೋತ್ಸಾಹ ಹೆಚ್ಚಿಸುತ್ತದೆ.
ಆಧುನಿಕ ತಂತ್ರಜ್ಞಾನದ ಒಡನಾಟ ಜೀವನದ ಬಗ್ಗೆ ಜಿಗುಪ್ಸೆ ಹೆಚ್ಚಿಸುತ್ತದೆ……

ಪ್ರಶ್ನಿಸುವ ಮನೋಭಾವ ಮನಸ್ಸನ್ನು ವಿಶಾಲಗೊಳಿಸಿ ಸದಾ ಜಾಗೃತವಾಗಿಟ್ಟಿರುತ್ತದೆ.
ಪ್ರಶ್ನಿಸದೆ ಒಪ್ಪಿಕೊಳ್ಳುವ ಮನೋಭಾವ ಮನಸ್ಸನ್ನು ಸಂಕುಚಿತಗೊಳಿಸಿ ಅರಿವಿನ ಮಟ್ಟವನ್ನು ಕುಗ್ಗಿಸುತ್ತದೆ……

ದ್ವೇಷ, ಅಸೂಯೆ, ಅಹಂಕಾರ, ಪ್ರತಿಕಾರಗಳು ಸಂಬಂಧಗಳನ್ನು ನಾಶಪಡಿಸುತ್ತದೆ.
ಪ್ರೀತಿ, ಸಹಕಾರ, ತ್ಯಾಗ, ತಾಳ್ಮೆ ಸಂಬಂಧಗಳನ್ನು ಬೆಳೆಸುತ್ತವೆ……

ಈ ಎಲ್ಲಾ ಆಯ್ಕೆಗಳು ಬಹುತೇಕ ನಮ್ಮ ನಿಯಂತ್ರಣಕ್ಕೆ ಒಳಪಟ್ಟಿರುತ್ತದೆ.
ಅನಿವಾರ್ಯತೆ ಹೊರತುಪಡಿಸಿ
ನಾವು ಯಾವುದನ್ನು ಎಷ್ಟು ಪ್ರಮಾಣದಲ್ಲಿ ಉಪಯೋಗಿಸಿಕೊಳ್ಳುತ್ತೇವೆ ಎಂಬುದರ ಮೇಲೆ ಬದುಕಿನ ಘನತೆ ನಿರ್ಧರಿಸಲ್ಪಡುತ್ತದೆ……

ಆಯ್ಕೆಗೆ ಮುನ್ನ ದಯವಿಟ್ಟು ಯೋಚಿಸಿ……

ದ್ವೇಷವನ್ನು ಸ್ವಲ್ಪ ಕಡಿಮೆ ಮಾಡಿಕೊಳ್ಳೋಣ ,
ಪ್ರೀತಿಯನ್ನು ಸ್ವಲ್ಪ ಹೆಚ್ಚು ಮಾಡಿಕೊಳ್ಳೋಣ…..

ಕೋಪವನ್ನು ಸ್ವಲ್ಪ ಕಡಿಮೆ ಮಾಡಿಕೊಳ್ಳೋಣ ,
ತಾಳ್ಮೆಯನ್ನು ಸ್ವಲ್ಪ ಹೆಚ್ಚು ಮಾಡಿಕೊಳ್ಳೋಣ……

ಸ್ವಾರ್ಥವನ್ನು ಸ್ವಲ್ಪ ಕಡಿಮೆ ಮಾಡಿಕೊಳ್ಳೋಣ ,
ತ್ಯಾಗವನ್ನು ಸ್ವಲ್ಪ ಹೆಚ್ಚು ಮಾಡಿಕೊಳ್ಳೋಣ……

ಗಲಾಟೆಗಳನ್ನು ಸ್ವಲ್ಪ ಕಡಿಮೆ ಮಾಡಿಕೊಳ್ಳೋಣ ,
ಸ್ನೇಹಿತರನ್ನು ಸ್ವಲ್ಪ ಹೆಚ್ಚು ಮಾಡಿಕೊಳ್ಳೋಣ ……

ಭ್ರಮೆಗಳನ್ನು ಸ್ವಲ್ಪ ದೂರ ಮಾಡೋಣ,
ವಾಸ್ತವಕ್ಕೆ ಸ್ವಲ್ಪ ಹತ್ತಿರವಾಗೋಣ……

ಬೂಟಾಟಿಕೆ ಸ್ವಲ್ಪ ಕಡಿಮೆ ಮಾಡೋಣ,
ನ್ಯೆಜತೆಗೆ ಸ್ವಲ್ಪ ಹೆಚ್ಚು ಒತ್ತು ಕೊಡೋಣ…….

ಎಲ್ಲವನ್ನೂ ನಿಮ್ಮ ಕುಟುಂಬಕ್ಕಾಗಿ ಮಾಡಿ,
ಆದರೆ ಸಮಾಜಕ್ಕಾಗಿ ಸ್ವಲ್ಪವಾದರೂ ಕೊಡಿ……

ಎಲ್ಲವೂ ನಿಮಗಾಗಿ,
ನೀವು ಮಾತ್ರ ಇತರರಿಗಾಗಿ……

ಮುಖವಾಡ ಮನಸ್ಥಿತಿ ಕಡಿಮೆ ಮಾಡಿ,
ವಾಸ್ತವ ಮನಸ್ಥಿತಿಗೆ ಹೆಚ್ಚು ಹತ್ತಿರವಾಗಿ…….

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್.ಕೆ.
9663750451…….
9844013068………

About Author

Leave a Reply

Your email address will not be published. Required fields are marked *

You may have missed