ಕಾಫಿನಾಡು ಆಲ್ದೂರಿನಲ್ಲಿ ನಾಡಪ್ರಭು ಕೆಂಪೇಗೌಡರ ಕಂಚಿನ ಪುತ್ಥಳಿ ಅನಾವರಣ….
1 min read
ಅವಿನ್ ಟಿವಿ ಸುದ್ದಿಜಾಲ ✒️: ಕಾಫಿನಾಡು ಆಲ್ದೂರಿನಲ್ಲಿ ನಾಡಪ್ರಭು ಕೆಂಪೇಗೌಡರ ಕಂಚಿನ ಪುತ್ಥಳಿ ಅನಾವರಣ.
“ಚರಿತ್ರೆಯೊಂದರ ಭಾವಕೋಶ ಕೆಂಪೇಗೌಡರು”: ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ
ಚಿಕ್ಕಮಗಳೂರು: ನಾಡಪ್ರಭು ಕೆಂಪೇಗೌಡರು ತಮ್ಮ ಬದುಕನ್ನು ಓದಿಸಿಕೊಳ್ಳಲು ಯೋಗ್ಯವಾದ ರೀತಿಯಲ್ಲಿ ಬದುಕಿ ಹೋದವರು ಎಂದು ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಜಗದ್ಗುರು ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿ ಹೇಳಿದರು.
ಅವರು ಸೋಮವಾರ ತಾಲ್ಲೂಕಿನ ಆಲ್ದೂರು ಪಟ್ಟಣದ ಹೃದಯ ಭಾಗದಲ್ಲಿ ಒಕ್ಕಲಿಗರ ಸಂಘದ ವತಿಯಿಂದ ಪ್ರತಿಷ್ಠಾಪಿಸಲಾದ ನಾಡಪ್ರಭು ಕೆಂಪೇಗೌಡರ ಕಂಚಿನ ಪುತ್ಥಳಿಯನ್ನು ಅನಾವರಣಗೊಳಿಸಿ ಆಶೀರ್ವಚನ ನೀಡಿ ಇತಿಹಾಸವನ್ನ ಸೃಷ್ಠಿಸಬೇಕಾದರೆ ಇತಿಹಾಸ ಸೃಷ್ಠಿಸಿದ ವ್ಯಕ್ತಿಗಳ ಜೀವನ ಚರಿತ್ರೆಯನ್ನ ಓದಬೇಕು. ನಮ್ಮ ಜನಪದರು ಹೇಳುವಂತೆ ಕೆಂಪೇಗೌಡರು ಆಚಾರಕ್ಕೆ ಹೆಸರಾಗಿದ್ದರು. ನೀತಿಗೆ ಪ್ರಭುವಾಗಿದ್ದರು. ಮಾತಿನಲಿ ಚೂಡಾಮಣಿಯಾಗಿದ್ದರು ಎಂದರು.
ಒಂದು ದೇಶವನ್ನು ಕಟ್ಟಿ ಉಳಿಸಿಕೊಳ್ಳಬೇಕಾದರೆ ಗೋಡೆಗಳನ್ನು ಕಟ್ಟಿಕೊಂಡರೆ ಸಾಕಾಗುವುದಿಲ್ಲ. ಅದರ ಬದಲು ಮನೆಯ ಮಕ್ಕಳನ್ನ ತಾಯಿ ಕಾಪಾಡಿಕೊಳ್ಳಬೇಕು. ಶಾಲಾ-ಕಾಲೇಜುಗಳಲ್ಲಿ ಓದುತ್ತಿರುವ ಮಕ್ಕಳಿಗೆ ನೀತಿ ಬೋಧಿಸಬೇಕು. ಯುವಕರಿಗೆ ಮಾತನಾಡುವ ಕಲೆಯನ್ನು ಹೇಳಿಕೊಟ್ಟರೆ ಮನೆಗೂ, ಸಮಾಜಕ್ಕೂ ದೇಶಕ್ಕೂ, ಜಗಕೆಲ್ಲಾ ಜ್ಯೋತಿ ಆಗುತ್ತಾರೆ. ಅಂತಹ ಶಿಕ್ಷಣವನ್ನು ಕೆಂಪೇಗೌಡರಿಗೆ ತಂದೆ, ತಾಯಿ ನೀಡಿದ್ದರು. ಆ ಕಾರಣಕ್ಕೆ ಅವರು ನಾಡಪ್ರಭುವಾದರು ಎಂದರು.
ಶಾಸಕಿ ನಯನಾ ಮೋಟಮ್ಮ ಮಾತನಾಡಿ, ನಮ್ಮ ಮುಂದಿನ ಪೀಳಿಗೆಗೆ ಇತಿಹಾಸದ ನೆನಪು ಮಾಡಿಕೊಡುವ ದೃಷ್ಠಿಯಿಂದ ಇಂತಹ ಪುತ್ಥಳಿಗಳನ್ನು ನಿರ್ಮಿಸುವುದು ಒಳ್ಳೆಯ ಕಾರ್ಯವಾಗಿದೆ. ಇತಿಹಾಸ ಮರೆತರೆ, ಇತಿಹಾಸ ನಿರ್ಮಿಸಲು ಸಾಧ್ಯವಿಲ್ಲ. ನಾಡಪ್ರಭು ಕೆಂಪೇಗೌಡರ ಇತಿಹಾಸವನ್ನೂ ಎಲ್ಲರೂ ತಿಳಿದುಕೊಳ್ಳಬೇಕು ಎಂದರು.
ರಾಜ್ಯ ಯುವ ಜನತಾದಳದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮಾತನಾಡಿ, ಆದಿಚುಂಚನಗಿರಿ ಮಠದ ವತಿಯಿಂದ ಕೆಂಪೇಗೌಡರ ಹೆಸರಿನಲ್ಲಿ ಸಿಟಿ ಮೊಬಿಲಿಟಿ ಅಂಡ್ ಸಸ್ಟೇನಬಲ್ ಕಾಲೇಜನ್ನು ಸ್ಥಾಪಿಸಲು ಶ್ರೀಗಳು ಯೋಜಿಸಿದ್ದಾರೆ. ನಮ್ಮ ಯುವ ಸಮುದಾಯಕ್ಕೆ ಕೆಂಪೇಗೌಡರು ಹಾಕಿಕೊಟ್ಟ ಮಾರ್ಗಕ್ಕೆ ತಕ್ಕಂತೆ ತರಬೇತಿ ನೀಡುವ ಮೂಲಕ ಸುಸ್ಥಿರ ಸಮಾಜ ಕಟ್ಟಲು ಅನುಕೂಲವಾಗುವಂತೆ ಕಾಲೇಜು ತರಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ.ರಾಜಶೇಖರ ಮಾತನಾಡಿ, ೫೦೦ ವರ್ಷ ಕಳೆದರೂ ಕೆಂಪೇಗೌಡರನ್ನು ಆರಾಧಿಸುತ್ತಿದ್ದೇವೆ. ಎಲ್ಲಾ ಜನಾಂಗಕ್ಕೆ ಅನುಕೂಲವಾಗುವಂತೆ ಬೆಂಗಳೂರು ಕಟ್ಟಿ, ಎಲ್ಲವನ್ನೂ ಸಮಾಜಕ್ಕೆ ತ್ಯಾಗ ಮಾಡಿದ್ದಾರೆ. ಇದರ ಪರಿಣಾಮ ಬೆಂಗಳೂರು ನಗರ ಇಂದು ಸಿಲಿಕಾನ್ ಸಿಟಿ ಎಂದು ಕರೆಸಿಕೊಳ್ಳುವಂತಾಗಿದೆ ಎಂದರು.
ಆಲ್ದೂರು ವಲಯದ ಒಕ್ಕಲಿಗರ ಸಂಘದ ಅಧ್ಯಕ್ಷ ಡಿ.ಬಿ.ಅಶೋಕ್ ಮಾತನಾಡಿ ಕೆಂಪೇಗೌಡರ ಪುತ್ಥಳಿ ನಿರ್ಮಾಣಕ್ಕೆ ಸಹಾಯ ಮಾಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು .
ಈ ಸಂದರ್ಭದಲ್ಲಿ ಶೃಂಗೇರಿ ಶಾಖಾ ಮಠದ ಶ್ರೀ ಗುಣನಾಥ ಸ್ವಾಮೀಜಿ, ವಿಧಾನಪರಿಷತ್ತು ಉಪಸಭಾಪತಿಗಳಾದ ಎಂ.ಕೆ.ಪ್ರಾಣೇಶ್, ಶೃಂಗೇರಿ ಶಾಸಕ ರಾಜೇಗೌಡ, ವಿಧಾನ ಪರಿಷತ್ತು ಸದಸ್ಯ ಸಿ.ಟಿ.ರವಿ, ಎಸ್.ಎಲ್.ಬೋಜೇಗೌಡ,ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಪೂರ್ಣೇಶ್, ತಾಲ್ಲೂಕು ಒಕ್ಕಲಿಗರ ಸಂಘದ ಗೌರವಾಧ್ಯಕ್ಷ ಹೆಚ್.ಎಸ್.ಕವೀಶ್, ಉಪಾಧ್ಯಕ್ಷ ಸಂಪತ್ ಹೆಡದಾಳ್, ಕಾರ್ಯದರ್ಶಿ ಡಿ.ಎಸ್.ವಸಂತ್ ಕುಮಾರ್, ಖಜಾಂಚಿ ಎಸ್.ಕೆ.ಲಿಂಗೇಗೌಡ, ಸಹಕಾರ್ಯದರ್ಶಿ ಡಿ.ಪಿ.ರಂಜಿತ್, ನಿರ್ದೇಶಕರುಗಳಾದ ಎ.ಡಿ.ಕೌಶಿಕ್, ಡಿ.ಎನ್.ನಾರಾಯಣ್, ಡಿ.ಆರ್.ಶ್ರೀಧರ್, ಹೆಚ್.ಎ.ರಘು, ಹೆಚ್.ಎಸ್.ಗಿರೀಶ್, ಡಿ.ಜೆ.ಸತೀಶ್, ಡಿ.ಎಂ.ಪ್ರವೀಣ್, ಎಚ್.ಆರ್.ವಿಶ್ವನಾಥ್. ವಿ.ಪಿ.ಪ್ರದೀಪ್ ತುಡುಕೂರು ಮಂಜು, ಆತ್ಮಿಕ್.ಡಿ.ಜಿ, ಸಿ.ಡಿ.ಶಿವಕುಮಾರ್, ಪ್ರತಾಪ್, ಆಲ್ದೂರು ಗ್ರಾಪಂ ಅಧ್ಯಕ್ಷರಾದ ಜುಬೈಧ ಹಸೈನಾರ್, ಶಿಲ್ಪಿ ವಿಜಯ್ ಬಿಡದಿ, ಕಾನೂನು ಸಲಹೆಗಾರ ಹೆಚ್.ಎಂ.ಕೃಷ್ಣೇಗೌಡಉಪಸ್ಥಿತರಿದ್ದರು.
•••••••••••••
ಡಿ.ಎಂ.ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ… ✒️
ಚಿಕ್ಕಮಗಳೂರು

