ಕಸಾಪದಲ್ಲಿ ಅಕ್ರಮ ಪ್ರಕರಣ, ನಾಡೋಜ ಡಾ.ಮಹೇಶ್ ಜೋಶಿ ಮಾ.೦೨ ರೊಳಗೆ ಶೋಕಾಸ್ ನೋಟಿಸ್ಗೆ ಉತ್ತರಿಸಬೇಕು : ಹೈಕೋರ್ಟ್…
1 min read






ಅವಿನ್ ಟಿವಿ ಸುದ್ದಿಜಾಲ ✒️: ಕಸಾಪದಲ್ಲಿ ಅಕ್ರಮ ಪ್ರಕರಣ, ನಾಡೋಜ ಡಾ.ಮಹೇಶ್ ಜೋಶಿ ಮಾ.೦೨ ರೊಳಗೆ ಶೋಕಾಸ್ ನೋಟಿಸ್ಗೆ ಉತ್ತರಿಸಬೇಕು : ಹೈಕೋರ್ಟ್
ಬೆಂಗಳೂರು ಫೆ ೨೫: ನಾಡೋಜ ಡಾ.ಮಹೇಶ್ ಜೋಶಿ ಅವರು ಆಡಳಿತಾಧಿಕಾರಿಯ ಶೋಕಾಸ್ ನೋಟಿಸ್ಗೆ ಉತ್ತರಿಸಬೇಕಿದೆ. ಈಗಾಗಲೇ ಪ್ರತಿಕ್ರಿಯೆ ಸಲ್ಲಿಸುವ ಕಾಲಾವಧಿಯೂ ಮುಗಿದಿದ್ದರೂ ಸಕಾರಣವಾದ ಸಮಯವನ್ನು ಜೋಶಿ ಅವರಿಗೆ ಪ್ರತಿಕ್ರಿಯೆ ಸಲ್ಲಿಸಲು ನೀಡಬೇಕಿದ್ದು, ಮಾರ್ಚ್ ೦೨ ರೊಳಗೆ ಜೋಶಿ ಅವರು ಶೋಕಾಸ್ ನೋಟಿಸ್ಗೆ ಉತ್ತರಿಸಬೇಕು ಎಂದು ಹೈಕೋರ್ಟ್ ನಿರ್ದೇಶಿಸಿದೆ.
ಡಾ. ಮಹೇಶ್ ಜೋಶಿಯವರ ಅಧಿಕಾರದ ಅವಧಿಯಲ್ಲಿ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ (ಕಸಾಪ) ನಡೆದಿದೆ ಎನ್ನಲಾದ ಅಕ್ರಮಗಳಿಗೆ ಸಂಬಂಧಿಸಿದಂತೆ ಅವರ ವಿರುದ್ಧ ತಳೆಯುವ ಯಾವುದೇ ನಿಲುವನ್ನು ಮುಂದಿನ ವಿಚಾರಣೆವರೆಗೆ ಜಾರಿಗೊಳಿಸಬಾರದು ಎಂದು ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಇಂದು ನಿರ್ದೇಶಿಸಿದೆ.
ಕನ್ನಡ ಸಾಹಿತ್ಯ ಪರಿಷತ್ತಿಲ್ಲಿನ ಅಕ್ರಮಗಳಿಗೆ ಸಂಬಂಧಿಸಿದಂತೆ ಆಡಳಿತಾಧಿಕಾರಿ ಜಾರಿ ಮಾಡಿರುವ ಶೋಕಾಸ್ ನೋಟಿಸ್ ಪ್ರಶ್ನಿಸಿ ಡಾ.ಮಹೇಶ್ ಜೋಶಿ ಅವರು ಸಲ್ಲಿಸಿರುವ ಅರ್ಜಿಯನ್ನು ರಾಜ್ಯ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಬಿ ಎಂ ಶ್ಯಾಮ್ ಪ್ರಸಾದ್ ಅವರ ಏಸದಸ್ಯ ಪೀಠ ವಿಚಾರಣೆ ನಡೆಸಿತು.
ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು “ಎಲ್ಲಾ ವಿಚಾರಗಳನ್ನು ಪರಿಗಣಿಸಲಾಗಿದ್ದು, ಮುಂದಿನ ವಿಚಾರಣೆಯವರೆಗೆ ಜೋಶಿ ಅವರ ವಿರುದ್ದ ಕೈಗೊಳ್ಳುವ ಕ್ರಮವನ್ನು ಜಾರಿಗೊಳಿಸಕೂಡದು ಎಂದು ಸರ್ಕಾರಕ್ಕೆ ನಿರ್ದೇಶಿಸಿತು.
ಮೇಲ್ನೋಟಕ್ಕೆ ಆಡಳಿತಾಧಿಕಾರಿಯು ಶೋಕಾಸ್ ನೋಟಿಸ್ ನೀಡುವ ಅಧಿಕಾರ ವ್ಯಾಪ್ತಿ ಹೊಂದಿರುವುದನ್ನು ಸಮರ್ಥಿಸಿದ್ದಾರೆಯೇ ಎಂಬ ಪ್ರಶ್ನೆ ಇದೆ. ಪಕ್ಷಕಾರರ ವಾದ ಆಲಿಸಿ ಇದನ್ನು ನಿರ್ಧರಿಸಲಾಗುವುದು ಎಂದು ನ್ಯಾಯಾಲಯ ಆದೇಶಿಸಿದೆ.
ಮಹೇಶ್ ಜೋಶಿ ಅವರ ಹಿರಿಯ ವಕೀಲ ಜಯಕುಮಾರ್ ಎಸ್. ಪಾಟೀಲ್ ಅವರು ಆಡಳಿತಾಧಿಕಾರಿಯು ಪರಿಷತ್ತಿನ ಪದಾಧಿಕಾರಿಗಳ ವಿರುದ್ಧ ದಂಡನೀಯ ಕ್ರಮಕೈಗೊಳ್ಳುವ ಅಧಿಕಾರ ಹೊಂದಿಲ್ಲ ಎಂದರು.
ಸರ್ಕಾರವನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್ ಅವರು ಸಹಕಾರ ಸಂಘಗಳ ನಿಬಂಧಕರನ್ನು ಪ್ರತಿವಾದಿ ಮಾಡಿಲ್ಲವಾದ್ದರಿಂದ ಅರ್ಜಿಯು ಊರ್ಜಿತವಾಗುವುದಿಲ್ಲ. ಆಡಳಿತಾಧಿಕಾರಿಯ ಅವಧಿಯು 2025ರ ಡಿಸೆಂಬರ್ 29 ಅಥವಾ ವರದಿ ಆಧರಿಸಿ ಕ್ರಮಕೈಗೊಳ್ಳುವವರೆಗೆ ಇದೆ. ಸಕ್ಷಮ ಪ್ರಾಧಿಕಾರವು ಸಲ್ಲಿಸುವ ವರದಿಯು ಈ ನ್ಯಾಯಾಲಯದ ಆದೇಶಕ್ಕೆ ಒಳಪಟ್ಟಿದೆ. ಹೀಗಾಗಿ, ಆಡಳತಾಧಿಕಾರಿಯ ವ್ಯಾಪ್ತಿಯನ್ನು ಪ್ರಶ್ನಿಸಲಾಗದು. ಕಸಾಪದಲ್ಲಿ ಸಾಕಷ್ಟು ಅಕ್ರಮ ನಡೆದಿದ್ದು, ದುರುಪಯೋಗವಾಗಿರುವ ಹಣವನ್ನು ಜೋಶಿ ಅವರಿಂದ ವಸೂಲಿ ಮಾಡಲು ಕ್ರಮಕೈಗೊಳ್ಳಬೇಕಿದೆ ಎಂದರು.
ಕೃಪೆ : ಬಾರ್ & ಬೆಂಚ್
••••••••••••••••
ಡಿ.ಎಂ.ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ …. ✒️
ಚಿಕ್ಕಮಗಳೂರು

