लाइव कैलेंडर

March 2026
M T W T F S S
 1
2345678
9101112131415
16171819202122
23242526272829
3031  
09/03/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಕಳ್ಳರ ಸಂತೆಯಲ್ಲಿ ನಿಂತು……

ಸರಗಳ್ಳರು,
ಜೇಬುಗಳ್ಳರು,
ಮನೆಗಳ್ಳರು,
ಮೊಬೈಲ್ ಕಳ್ಳರು,
ಎಟಿಎಂ ಕಳ್ಳರು,
ವಾಹನಗಳ್ಳರು,
ಡೀಸೆಲ್, ಪೆಟ್ರೋಲ್ಗಳರು,
ಬ್ಯಾಂಕ್ ದರೋಡೆಕೋರರು,
ಬೀದಿಗಳ್ಳರು,
ತೋಟದ ಹಣ್ಣು, ತರಕಾರಿ ಕಳ್ಳರು,
ಕಂಬಿ ಕಳ್ಳರು,
ನೀರು ಕಳ್ಳರು,
ವಿದ್ಯುತ್ ಕಳ್ಳರು,
ಖೋಟಾ ನೋಟು ತಯಾರಕರು,,
ಕಳ್ಳಬಟ್ಟಿ ತಯಾರಕರು,
ಆಹಾರ ಕಲಬೆರಕೆ ಮಾಡುವವರು,
ಬಸ್ಸು, ರೈಲು ಟಿಕೆಟ್ ಪಡೆಯದೆ ಪ್ರಯಾಣಿಸುವವರು,
ಹುಂಡಿ ಕಳ್ಳರು,
ಚಿನ್ನ, ಬೆಳ್ಳಿ ಕಳ್ಳರು,…..

ಹೀಗೆ ಸಾಂಪ್ರದಾಯಿಕ ಕಳ್ಳರು ಬಹಳ ಹಿಂದಿನಿಂದಲೂ ಸಮಾಜದಲ್ಲಿ ತಮ್ಮ ಕೈಚಳಕ ತೋರಿಸುತ್ತಾ ಬಂದಿದ್ದಾರೆ. ಬಹುತೇಕ ಇವರು ಹೊಟ್ಟೆಪಾಡಿಗಾಗಿ ಮತ್ತು ಕೆಲವರು ಸಾಲಬಾಧೆ ತೀರಿಸಲು, ಇನ್ನೂ ಕೆಲವರು ದುಶ್ಚಟಗಳಿಗೆ ಬಲಿಯಾಗಿ, ಮತ್ತೆ ಕೆಲವರು ಶೋಕಿಗಾಗಿ ಕಳ್ಳರಾಗಿರುತ್ತಾರೆ.

ಈಗ ಹೊಸ ಹೊಸ ಕಳ್ಳತನದ ವಿಧಾನಗಳು ಪರಿಚಯವಾಗಿ ಬೇರೆ ಬೇರೆ ರೂಪ ಪಡೆಯುತ್ತಿವೆ.
ಖಜಾನೆ ಕಳ್ಳರು,
ಆನ್ಲೈನ್ ಕಳ್ಳರು,
ಹನಿ ಟ್ರಾಪ್ ಮಾಡುವವರು,
ಬ್ಲಾಕ್ ಮೇಲ್ ಮಾಡುವವರು,
ಓಟಿಪಿ ಕಳ್ಳರು,
ನಕಲಿ ಪೊಲೀಸ್ ವೇಷದ ಕಳ್ಳರು, ನಕಲಿ ತೆರಿಗೆ ಇಲಾಖೆ ವೇಷದ ಕಳ್ಳರು, ತೆರಿಗೆ ಕಳ್ಳರು,
ಒಂದೇ ಮನೆ, ಜಮೀನು ನಾಲ್ಕೈದು ಜನರಿಗೆ ಮಾರುವ ದಗಾಕೋರರು,
ನಕಲಿ ದಾಖಲೆ ಸೃಷ್ಟಿಸಿ ಬ್ಯಾಂಕಿಗೆ ವಂಚಿಸುವವರು,……

ಹೀಗೆ ಹೊಸ ಹೊಸ ಅವತಾರಗಳಲ್ಲಿ ಕಳ್ಳತನ ಮಾಡುತ್ತಿದ್ದಾರೆ. ಬಹುತೇಕ ಇವರು ಹೊಟ್ಟೆಪಾಡು ಮೀರಿ ಇಂದಿನ ಆಧುನಿಕ ಕಾಲದ ಹಣ ಕೇಂದ್ರಿತ ಸಮಾಜದಲ್ಲಿ ಅತಿಯಾದ ದುಡ್ಡಿನ ಮೋಹಕ್ಕೆ ಬಲಿಯಾಗಿ ಶ್ರಮ ಸಂಸ್ಕೃತಿ ಮರೆತು ಇನ್ನೊಬ್ಬರನ್ನು ವಂಚಿಸಿ ಸುಲಭವಾಗಿ ಹಣ ಮಾಡುವ ದಂಧೆಗೆ ಇಳಿದಿರುವವರು ಇವರು. ಅತಿಯಾದ ದುರಾಸೆಯಿಂದ ಬದುಕನ್ನು ನರಕಯಾತನೆ ಮಾಡಿಕೊಳ್ಳುತ್ತಿದ್ದಾರೆ. ಈ ರೀತಿಯ ವಂಚನೆ ಮಾಡುವವರು ನೆಮ್ಮದಿಯಿಂದ ಬದುಕುವುದು ತುಂಬಾ ಕಷ್ಟ. ಎಲ್ಲೋ ಕೆಲವರು ಮೇಲ್ನೋಟಕ್ಕೆ ಯಶಸ್ವಿಯಾಗಿರಬಹುದಷ್ಟೇ.

ಇವರ ಜೊತೆಗೆ

ಮತ್ತೊಂದು ರೂಪದ ಹೊಸ ಕಳ್ಳರು ಕಣ್ಣಿಗೆ ಕಂಡರೂ ಸಮಾಜದಲ್ಲಿ ಗಣ್ಯರಂತೆ ಕಾಣಿಸಿಕೊಂಡು ಪರೋಕ್ಷವಾಗಿ ಕಳ್ಳತನ ಮಾಡುತ್ತಿದ್ದಾರೆ.

ಒಳ್ಳೆಯ ಗುಣಮಟ್ಟದ ಬ್ರಾಂಡೆಡ್ ವಸ್ತುಗಳನ್ನು ನಕಲಿ ಮಾಡಿ ಮಾರಾಟ ಮಾಡುವ ಕಳ್ಳರು,
ನಕಲಿ ಬಿಲ್ ನೀಡಿ ಹಣದೋಚುವ ಕಳ್ಳರು,
ಸ್ವಾಮೀಜಿ ವೇಷಧಾರಿಯ ಕಳ್ಳರು,
ಪತ್ರಕರ್ತರ ಮುಖವಾಡದ ಕಳ್ಳರು, ಆಸ್ಪತ್ರೆ, ಶಾಲೆ ಮುಂತಾದ ಹೆಸರಿನಲ್ಲಿ ಹಣದೋಚುವ ಕಳ್ಳರು,
ಮೊಬೈಲ್, ಕಂಪ್ಯೂಟರ್, ಇಂಟರ್ನೆಟ್ ಹೆಸರಿನಲ್ಲಿ ದುಬಾರಿ ಬೆಲೆಗೆ ಮಾರಿ ಹಣ ದೋಚುವ ಕಳ್ಳರು,
ಖಾಸಗಿ ಬಸ್ಸಿನಲ್ಲಿ ಇಷ್ಟ ಬಂದಂತೆ ಬೇಡಿಕೆ ನೋಡಿಕೊಂಡು ಹೆಚ್ಚು ಹಣ ವಸೂಲಿ ಮಾಡುವ ಕಳ್ಳರು,
ಸಿನಿಮಾ ಟಿಕೆಟ್ ಅನ್ನು ಅತ್ಯಂತ ದುಬಾರಿ ಮಾಡಿ ಸಿನಿಮಾ ಪ್ರಿಯರ ಜೇಬಿಗೆ ಕನ್ನ ಹಾಕುವ ಕಳ್ಳರು, ಸಿನಿಮಾ ಮಂದಿರಗಳಲ್ಲಿ ನೀರು, ಆಹಾರಕ್ಕೆ ಸಾಮಾನ್ಯ ಬೆಲೆಗಿಂತ ಹತ್ತು ಪಟ್ಟು ಪಟ್ಟು ಬೆಲೆ ಏರಿಕೆ ಮಾಡಿ ಹಣ ಕೊಳ್ಳೆ ಹೊಡೆಯುವ ಕಳ್ಳರು, ಉದ್ಯೋಗ ಕೊಡಿಸುತ್ತೇನೆ ಎಂದು ವಂಚಿಸುವ ಕಳ್ಳರು, ಮದುವೆಯಾಗುತ್ತೇನೆಂದು ಸುಳ್ಳು ಭರವಸೆ ನೀಡಿ ದಾರಿ ತಪ್ಪಿಸುವ ಕಳ್ಳರು,
ಆನ್ಲೈನ್ ಗೇಮ್ ಮಾಡಿ ಜನರನ್ನು ಮತಿಭ್ರಮಣೆ ಮಾಡಿ ಹಣ ದೋಚುವ ಕಳ್ಳರು,
ಹೋಟೆಲ್ಗಳಲ್ಲಿ ಅನಾವಶ್ಯಕ ಬೆಲೆ ಏರಿಕೆ ಮಾಡಿ ದೋಚುವ ಕಳ್ಳರು, ಫ್ಯಾಷನ್ ಡಿಸೈನ್ ಎಂದು ಹೇಳಿ ಹಣ ದೋಚುವ ಕಳ್ಳರು,
ಕಂಟ್ರಾಕ್ಟರ್ ಎಂದು ಹೇಳಿಕೊಂಡು ಕಳಪೆ ಗುಣಮಟ್ಟದ ಕಾಮಗಾರಿ ಮಾಡಿ ಹಣ ದೋಚುವ ಕಳ್ಳರು,
ಡೊನೇಷನ್ ಖದೀಮರು,
ಸಮಾಜ ಸೇವೆ, ಹೋರಾಟ, ಚಳವಳಿಯ ಹೆಸರಿನಲ್ಲಿ ರೋಲ್ ಕಾಲ್ ಮಾಡುವ ಕೆಲವು ಕಳ್ಳರು,
ಬರಹ, ಭಾಷಣ ಮಾಡಿ ಜನರಿಗೆ ಸುಳ್ಳು ಹೇಳಿ ಹಣ ಮಾಡುವ ಕೆಲವು ಕಳ್ಳರು,
ಜ್ಯೋತಿಷ್ಯದ ಹೆಸರಿನಲ್ಲಿ ಹಣ ಮಾಡುವ ಕೆಲವು ಕಳ್ಳರು,
ಮೋಸದ ಜಾಹೀರಾತು ನೀಡಿ ಹಣ ದೋಚುವ ಕಳ್ಳರು,…

ಇಂತಹ ಆಧುನಿಕ ಸಮಾಜದಲ್ಲಿ ನಾವು ಬದುಕು ಕಟ್ಟಿಕೊಳ್ಳಬೇಕಿದೆ. ಆದರೂ ನಿರಾಶರಾಗಬೇಕಿಲ್ಲ. ಈ ಸಮಾಜದಲ್ಲಿ ಇದನ್ನು ಹೊರತುಪಡಿಸಿ ಅತ್ಯಂತ ಪ್ರಾಮಾಣಿಕವಾಗಿ, ದಕ್ಷತೆಯಿಂದ, ನಿರ್ಲಿಪ್ತವಾಗಿ ತಮ್ಮ ತಮ್ಮ ವೃತ್ತಿ ಧರ್ಮ ಪಾಲಿಸುತ್ತಾ ಜೀವನ ಸಾಗಿಸುತ್ತಿರುವ ಬಹುಸಂಖ್ಯಾತರು ಇದ್ದಾರೆ .. ಅದರಿಂದಾಗಿಯೇ ಈ ಸಮಾಜ ಒಂದಷ್ಟು ನೆಮ್ಮದಿಯಾಗಿ ಮುಂದುವರಿಯುತ್ತಿದೆ.

ಆದರೆ ಈ ಕಳ್ಳರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿರುವುದು ಆತಂಕದ ವಿಷಯ. ಸಾಧ್ಯವಾದಷ್ಟು ನಾವುಗಳು ಸಹ ಈ ಕಳ್ಳರ ಮನ:ಪರಿವರ್ತನೆ ಮಾಡಿ ಅವರನ್ನು ಶ್ರಮ ಸಂಸ್ಕೃತಿಯ ವ್ಯಾಪ್ತಿಗೆ ತಂದರೆ, ಮುಖ್ಯವಾಗಿ ರಾಜಕಾರಣಿಗಳು, ಅಧಿಕಾರಿಗಳು, ಪತ್ರಕರ್ತರು, ಸ್ವಾಮೀಜಿಗಳು, ಶಿಕ್ಷಕರು, ವೈಧ್ಯರು, ವಕೀಲರು, ಪೊಲೀಸರು ಮುಂತಾದವರು ಒಂದಷ್ಟು ಪ್ರಾಮಾಣಿಕತೆ, ಸರಳತೆ, ಮಾನವೀಯತೆ ಬೆಳೆಸಿಕೊಂಡರೆ ಸಮಾಜದ ಇನ್ನುಳಿದ ವರ್ಗ ಅವರನ್ನು ಅನುಸರಿಸುತ್ತದೆ. ಆ ನಿಟ್ಟಿನಲ್ಲಿ ಪ್ರಯತ್ನಗಳು ಸಾಗಲಿ ಎಂದು ಆಶಿಸುತ್ತಾ………..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.
9663750451….
9844013068……

About Author

Leave a Reply

Your email address will not be published. Required fields are marked *

You may have missed