ಕನ್ನಡ ಮಾಧ್ಯಮಕ್ಕೆ ಭವಿಷ್ಯವಿಲ್ಲವೆಂದು ಅಳುವವರು, ಆಳುವವರೆಲ್ಲರೂ ನೋಡಬೇಕಿಲ್ಲಿ…!
1 min read
ಕನ್ನಡ ಮಾಧ್ಯಮಕ್ಕೆ ಭವಿಷ್ಯವಿಲ್ಲವೆಂದು ಅಳುವವರು, ಆಳುವವರೆಲ್ಲರೂ ನೋಡಬೇಕಿಲ್ಲಿ…!





ಆಳ್ವಾಸ್ ಕನ್ನಡ ಶಾಲೆಗೆ ಸೇರಲು ನಾಡಿನೆಲ್ಲೆಡೆಯಿಂದ 23401 ಅರ್ಜಿ, ಧಾವಿಸಿ ಬಂದ 20146 ಮಂದಿ ಸಾವಿರ ಮಕ್ಕಳು…
ನಾಡಿನೆಲ್ಲೆಡೆ ಅನಾಥ ಪ್ರಜ್ಞೆಯಿಂದ ಬಳಲುತ್ತಿರುವ ಕನ್ನಡ ಮಾಧ್ಯಮ ಶಾಲೆಗಳು, ಸರಿಯಾದ ಶಿಕ್ಷಕರಿಲ್ಲ, ಇದ್ದರೂ ಸೌಲಭ್ಯಗಳಿಲ್ಲ, ಸೂರು ಕಳಚಿ ಬೀಳುವಂತಿದ್ದರೂ ಕೇಳುವವರಿಲ್ಲದ ಶಾಲೆಗಳು ಹೀಗಾಗಿ ಮಕ್ಕಳೇ ಮಾಯವಾಗಿ ದಯನೀಯ ಸ್ಥಿತಿಯಲ್ಲಿರುವ ಕನ್ನಡ ಶಾಲೆಗಳ ಪರಿಸ್ಥಿತಿ ಶತ್ರುಗಳಿಗೂ ಬರಬಾರದು ಎಂಬಂತಿದೆ.
ಸರಕಾರದ ಇಚ್ಛಾಶಕ್ತಿಯ ಕೊರತೆ, ನಾಡು, ನುಡಿ ಸಂಸ್ಕೃತಿಯ ಉಳಿವು ಮತ್ತು ಬೆಳವಣಿಗೆಗೆ ಕನ್ನಡ ಮತ್ತು ಕನ್ನಡ ಮಾಧ್ಯಮ ಶಾಲೆಗಳ ಸಬಲೀಕರಣವೇ ಮೂಲ ಮಂತ್ರ ಎನ್ನುವ ಅರಿವಿದ್ದರೂ ಜಾಣ ಮರೆವು ಪ್ರದರ್ಶಿಸುತ್ತಿರುವ ಸರಕಾರೀ ಧೋರಣೆಯಿಂದಾಗಿ ನಮ್ಮ ಸರಕಾರಿ ಶಾಲೆಗಳು ಪಾಳು ಬಂಗಲೆಯಂತಾಗಿವೆ.
ರಾಜಾಶ್ರಯವಿಲ್ಲದ ಖಾಸಗಿ ಕನ್ನಡ ಮಾಧ್ಯಮ ಶಾಲೆಗಳೂ ಬಾಗಿಲೆಳೆದುಕೊಳ್ಳಲು ಸರತಿ ಸಾಲಿನಲ್ಲಿವೆ. ಆದರೆ ಈ ನಡುವೆ ಮನಸ್ಸಿದ್ದರೆ ಮಾರ್ಗವಿದೆ. ಯಾವುದಕ್ಕೂ ಇಚ್ಛಾಶಕ್ತಿಯಿರಬೇಕು ಸಾಧಿಸುವ ಉತ್ಸಾಹವಿರಬೇಕು ಆಗ ಗೆಲುವಿನ ಹಾದಿ ತನ್ನಿಂತಾನೇ ತೆರೆದುಕೊಳ್ಳುತ್ತದೆ ಎನ್ನುವುದನ್ನು ನಾಡಿಗೇ ತೊರಿಸಿಕೊಡುವ ಕೆಲಸ ಜ್ಞಾನಕಾಶಿ ಮೂಡುಬಿದಿರೆಯ ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯಿಂದಾಗಿದೆ.
ಕನ್ನಡ ಮಾಧ್ಯಮ ಶಾಲೆಗಳಿಗೆ ಮಕ್ಕಳೇ ಬರುತ್ತಿಲ್ಲ ಎನ್ನುವ ಆತಂಕದ ನಡುವೆ ನಾಡಿನ ಕನ್ನಡಿಗರೆಲ್ಲ ಬೆರಗಾಗುವಂತೆ ಬರೋಬ್ಬರಿ 23041 ಮಂದಿ ಅರ್ಜಿ ಸಲ್ಲಿಸಿದ್ದು ರವಿವಾರ ನಡೆದ ಪ್ರವೇಶ ಪರೀಕ್ಷೆಗೆ 20146 ಮಂದಿ ಹಾಜರಾಗಿದ್ದಾರೆ.
ಅರ್ಹತಾ ಪರೀಕ್ಷೆಗಳನ್ನೆಲ್ಲ ದಾಟಿ ಬರುವ ಮಕ್ಕಳಿಗೆ ಇಲ್ಲಿ ಸಂಪೂರ್ಣ ಉಚಿತ ಸನಿವಾಸ ಶುಲ್ಕ ರಹಿತ ಶಿಕ್ಷಣ ನೀಡಲಾಗುತ್ತಿದೆ ಎನ್ನುವುದು ವಿಶೇಷ.
ಹೌದು ಕಳೆದ 18 ವರ್ಷಗಳಿಂದ ನಾಡಿಗೇ ಮಾದರಿಯಾಗಿ ಕನ್ನಡ ಮಾಧ್ಯಮ ಶಾಲೆ ಕಟ್ಟಿ ಮಾದರಿಯಾದವರು ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ. ಕನ್ನಡದ ಕಾಳಜಿ ಬರೇ ಬಾಯಿ ಮಾತಲ್ಲಿದ್ದರೆ ಸಾಲದು. ಕಾಲಕ್ಕೆ ಸರಿಯಾಗಿ ಅದನ್ನು ಕಟ್ಟಿ ಬೆಳೆಸುವ ನಮ್ಮ ಪ್ರಯತ್ನವೂ ಜತೆಗಿರಬೇಕು. ಆಗ ಕನ್ನಡ ಮಾತ್ರವಲ್ಲ ಕನ್ನಡ ಮಾಧ್ಯಮ ಶಾಲೆಗಳು ಸೋಲುವ ಪ್ರಶ್ನೆಯೇ ಇಲ್ಲ ಎಂದ ಬಲವಾಗಿ ಪ್ರತಿಪಾದಿಸುವ ಡಾ. ಆಳ್ವ ತನ್ನ ಕನಸನ್ನು ಕನ್ನಡ ಮಾಧ್ಯಮದ ಹೊಸ ಪ್ರಯೋಗ ಶಾಲೆ ತೆರೆದು ನನಸಾಗಿಸಿದ್ದಾರೆ.
ಒಬ್ಬ ವಿದ್ಯಾರ್ಥಿಗೆ ಇಲ್ಲಿ ವಾರ್ಷಿಕ ಒಂದೂವರೆ ಲಕ್ಷ ರೂಪಾಯಿ ಅಂದರೆ 10 ಕೋಟಿಗೂ ಮೀರಿ ಖರ್ಚಾಗುತ್ತಿದೆ. ಎಲ್ಲ ಸೌಲಭ್ಯಗಳನ್ನೂ ಉಚಿತವಾಗಿಯೇ ಒದಗಿಸ
ಲಾಗುತ್ತಿದೆ. ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಸ್ವಾಭಿಮಾನ, ಅಭಿಮಾನ ಕ್ಕೆ ಕಿಂಚಿತ್ತೂ ಕೊರತೆ ಕಾಡದ ವಾತಾವರಣ ಇಲ್ಲಿದೆ.
ಈಗಾಗಲೇ ಈ ಶಾಲೆಗಳ ಮೂಲಕ ಆರರಿಂದ ಹತ್ತನೇ ತರಗತಿ ವರೆಗೆ ಕ್ರೀಡೆ, ಸಂಸ್ಕೃತಿ, ವಿಶೇಷ ಕಲಿಕಾ ಸಾಮರ್ಥ್ಯ, ಹೆತ್ತವರನ್ನು ಕಳಕೊಂಡವರು, ಸೇನೆಯಲ್ಲಿರುವವರ ಮಕ್ಕಳು, ಹಿಂದುಳಿದ ವರ್ಗದ ಮಕ್ಕಳನ್ನು ಅಳೆದು ತೂಗಿ ಆರಿಸಿ ಸಂಪೂರ್ಣ ಉಚಿತ ಶಿಕ್ಷಣ ಯೋಜನೆಯಡಿ ಕಲಿತ 1862ಕ್ಕೂ ಮಕ್ಕಳು ಸಮಾಜದಲ್ಲಿ ವಿವಿಧ ಕ್ಷೇತ್ರಗಳಲ್ಲಿ, ವೈದ್ಯಕೀಯ, ಇಂಜಿನಿಯರಿಂಗ್, ಕಾನೂನು ಇನ್ನಿತರ ಪದವಿಗಳೊಂದಿಗೆ ಸಾಧಕ ವಿದ್ಯಾರ್ಥಿಗಳಾಗಿ ಮೂಡಿ ಬಂದಿದ್ದಾರೆ.
ಪ್ರತಿಯೊಬ್ಬರ ಮೇಲೂ ವಾರ್ಷಿಕ ಒಂದೂವರೆ ಲಕ್ಷದ ವೆಚ್ಚವನ್ನೇ ಗಣನೆಗೆ ತೆಗೆದುಕೊಂಡರೂ ಈವರೆ 140 ಕೋಟಿ ರೂಗಳಿಗೂ ಮಿಕ್ಕಿದ ವೆಚ್ಚವನ್ನು ಕನ್ನಡದ ಈ ಮಕ್ಕಳಿಗಾಗಿ ಆಳ್ವರು ಭರಿಸಿದ್ದಾರೆ.
ಆರಂಭದಿಂದ ಈವರೆಗೂ ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಗೆ ವರ್ಷವೂ ಸಾವಿರಾರು ಮಕ್ಕಳು ಪ್ರವೇಶ ಪರೀಕ್ಷೆಗೆ ಧಾವಿಸುತ್ತಲೇ ಇದ್ಧಾರೆ. ವರ್ಷವೂ ಈ ಕನ್ನಡ ಶಾಲೆಯ ಎಸ್ಸೆಸ್ಸೆಲ್ಸಿ ಬ್ಯಾಚ್ ಶೇ 100ರ ಸಾಧನೆ ಕಾಯ್ದುಕೊಂಡಿದೆ.
ರಾಜ್ಯದ 15 ಸಾವಿರಕ್ಕೂ ಮಿಕ್ಕಿದ ಕನ್ನಡ ಶಾಲೆಗಳ ಪೈಕಿ ಆಳ್ವಾಸ್ ಕನ್ನಡ ಮಾಧ್ಯಮ ಶಾಲೆ ಈಗ ನಂ1 ಸ್ಥಾನದಲ್ಲಿದೆ. ಹೀಗೆ ಮನಸ್ಸಿದರೆ ಮಾರ್ಗವಿದೆ ಎನ್ನುವುದನ್ನು ನಾಡನ್ನು ಆಳುವವರಿಗೆ, ಕನ್ನಡಕ್ಕೆ ಭವಿಷ್ಯವಿಲ್ಲ ಎಂದು ಅಳುವವರಿಗೆ ಡಾ. ಮೋಹನ ಆಳ್ವ ಸಾಕ್ಷಿ ಸಮೇತ ಸಾಬೀತು ಪಡಿಸಿದ್ದಾರೆ.
ಹರಿದು ಬಂತು ವಿದ್ಯಾರ್ಥಿಸಾಗರ..!
ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯ 2026-27ನೇ ಸಾಲಿನ, 6 ರಿಂದ 9ನೇ ತರಗತಿಯ ಸಂಪೂರ್ಣ ಉಚಿತ ಶಿಕ್ಷಣ ಸೌಲಭ್ಯಕ್ಕೆ ನಡೆಸುವ ಪ್ರವೇಶ ಪರೀಕ್ಷೆಯಲ್ಲಿ 20,146 ವಿದ್ಯಾರ್ಥಿಗಳು ಮೂಡುಬಿದಿರೆಯ ವಿದ್ಯಾಗಿರಿ ಹಾಗೂ ಪುತ್ತಿಗೆ ಆವರಣದಲ್ಲಿ ಭಾನುವಾರ ಹಾಜರಾದರು.
ರಾಜ್ಯಾದ್ಯಂತ ಹಾಗೂ ಕರ್ನಾಟಕದ ಗಡಿ ಪ್ರದೇಶ ಕೇರಳದ ಕಾಸರಗೋಡು, ಮಹಾರಾಷ್ಟçದ ಗಡಿ ಪ್ರದೇಶವೂ ಸೇರಿದಂತೆ 32 ಶೈಕ್ಷಣಿಕ ಜಿಲ್ಲೆಗಳ 23,141 ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದು, 20,146 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾದರು.
6ನೇ ತರಗತಿಗೆ 16,014, 7ನೇ ತರಗತಿಗೆ 1,374, 8ನೇ ತರಗತಿಗೆ 1,983 ಹಾಗೂ 9ನೇ ತರಗತಿಗೆ 775 ವಿದ್ಯಾರ್ಥಿಗಳು ಪ್ರವೇಶ ಪರೀಕ್ಷೆ ಬರೆದರು. ಬೆಳಗಾವಿ ಜಿಲ್ಲೆಯಿಂದ 7,353 ವಿದ್ಯಾರ್ಥಿಗಳು, ಬಾಗಲಕೋಟೆ ಜಿಲ್ಲೆಯಿಂದ 4,080 ಹಾಗೂ ವಿಜಯಪುರದಿಂದ ಕ್ರಮವಾಗಿ 2,961 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾದರು.
ಪರೀಕ್ಷಾ ಅರ್ಜಿ ಸಲ್ಲಿಕಾ ವ್ಯವಸ್ಥೆಯು ಕಳೆದ 3 ವರ್ಷದಿಂದ ಪ್ರತಿಭಾನ್ವಿತ ಮಕ್ಕಳನ್ನು ತಲುಪುವ ನಿಟ್ಟಿನಲ್ಲಿ ಆನ್‌ಲೈನ್‌ನಲ್ಲಿ ಅರ್ಜಿ ನಮೂನೆಯನ್ನು ವ್ಯವಸ್ಥೆಗೊಳಿಸಿಲಾಗಿತ್ತು.
ಕ್ಯೂಆರ್ ಕೋಡ್ ಸಹಿತವಾಗಿ ವ್ಯವಸ್ಥೆ
ಗೊಳಿಸಿಲಾಗಿತ್ತು.ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳನ್ನು ಅರ್ಜಿ ಸಲ್ಲಿಸಿದ್ದರಿಂದ 5 ಕೇಂದ್ರಗಳಲ್ಲಿ ಪರೀಕ್ಷಾ ಕೊಠಡಿ ವ್ಯವಸ್ಥೆ ಮಾಡಲಾಗಿತ್ತು.
ಆಳ್ವಾಸ್ ವಿದ್ಯಾಗಿರಿ ಹಾಗೂ ಪುತ್ತಿಗೆ ಕ್ಯಾಂಪಸ್‌ನ ಯಶೋಕಿರಣ ಬ್ಲಾಕ್, ಜಗನ್ಮೋಹನ ಬ್ಲಾಕ್, ಕಾಮರ್ಸ್ ಬ್ಲಾಕ್, ಆಳ್ವಾಸ್ ಪದವಿ ಕಾಲೇಜು ಮತ್ತು ಆಳ್ವಾಸ್ ಆಂಗ್ಲ ಮಾಧ್ಯಮ ಶಾಲೆ ಪ್ರವೇಶ ಪರೀಕ್ಷೆ ನಡೆಸಲಾಗಿದೆ.
6 ಮತ್ತು 9ನೇ ತರಗತಿಯವರೆಗೆ ಎಲ್ಲಾ ಪಠ್ಯ ವಿಷಯಗಳು ಸೇರಿದಂತೆ ತಾರ್ಕಿಕ ಸಾಮರ್ಥ್ಯ ಆಧಾರಿತವಾಗಿ 150 ಅಂಕಗಳಿಗೆ 2.30 ಗಂಟೆಗಳ ಕಾಲ ಪರೀಕ್ಷೆ ನಡೆದಿದೆ.
ಪ್ರಾಥಮಿಕ ಹಂತದಲ್ಲಿ ಒಎಮ್‌ಆರ್ ಆಧಾರಿತ ಬಹು ಆಯ್ಕೆ ಮಾದರಿ ಪ್ರಶ್ನೆ ಪತ್ರಿಕೆಯನ್ನು ಸ್ಪರ್ಧಾತ್ಮಕ ಪರೀಕ್ಷೆಯಂತೆ ಪ್ರಶ್ನೆ ಪ್ರತ್ರಿಕೆಗಳನ್ನು ಎ, ಬಿ, ಸಿ, ಡಿ, ಇ ಸಿರೀಸ್‌ನಲ್ಲಿ ನೀಡಲಾಗಿದೆ. ವಿದ್ಯಾರ್ಥಿಯ ಚಿಂತನಾ ಸಾಮರ್ಥ್ಯವನ್ನು ಗುರುತಿಸಿದ ನಂತರ, ಸಂಸ್ಥೆ ನಿಗದಿ ಪಡಿಸಿದ ಮಾನದಂಡ ಗಳಿಸಿದವರು ಮುಖ್ಯ ಹಂತಕ್ಕೆ ಆಯ್ಕೆಯಾಗಲಿದ್ದಾರೆ.
ಮುಖ್ಯ ಹಂತದಲ್ಲಿ ಬರವಣಿಗೆ ಆಧಾರಿತ ಪರೀಕ್ಷೆ ಇದ್ದು ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯವನ್ನು ಮತ್ತು ಕೌಶಲ್ಯಗಳನ್ನು ಗಮನಿಸಿ ಸಂದರ್ಶನ ಹಂತಕ್ಕೆ ಆಯ್ಕೆ ಮಾಡಲಾಗುತ್ತದೆ. ಸಂದರ್ಶನ ಹಂತದಲ್ಲಿ ಶಿಕ್ಷಣ ತಜ್ಞರು ಮತ್ತು ವಿಷಯ ತಜ್ಞರಿದ್ದ ತಂಡವನ್ನು ರಚಿಸಲಾಗಿದ್ದು ಖುದ್ದು ತಂಡದ ಮುಖ್ಯಸ್ಥರಾಗಿ ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ ಆಳ್ವರೇ ಸ್ವತಃ ಸಂದರ್ಶನ ನಡೆಸಿ ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯ, ಭಾಷಾ ಸಾಮರ್ಥ್ಯ ಮತ್ತು ಆಳ್ವಾಸ್‌ನ ಕಲಿಕಾ ವ್ಯವಸ್ಥೆಗಳಿಗೆ ಪೂರಕವಾಗಿರುವವರನ್ನು, ಜೊತೆಗೆ ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿರುವ ಪಾಲಕರ ಮಕ್ಕಳಿಗೆ, ತಂದೆ ತಾಯಿಯವರನ್ನು ಕಳೆದುಕೊಂಡ ಮಕ್ಕಳಿಗೆ ಸಮಾಜದ ಅತ್ಯಂತ ಹಿಂದುಳಿದ ವರ್ಗಗಳಿಗೆ ವಿಶೇಷ ಆದ್ಯತೆಯನ್ನು ನೀಡಿ ದಾಖಲಾತಿ ವ್ಯವಸ್ಥೆಯನ್ನು ಮಾಡಲಾಗುತ್ತದೆ.
ಈಗಾಗಲೇ ಕ್ರೀಡಾ ಹಾಗೂ ಸಾಂಸ್ಕೃತಿಕ ವಿಭಾಗದ ಪ್ರತಿಭಾನ್ವಿತ ವಿದ್ಯಾರ್ಥಿಗಳ ಆಯ್ಕೆ ಪ್ರಕ್ರಿಯೆಗಾಗಿ ಪತ್ರಿಕಾ ಪ್ರಕಟಣೆ ನೀಡಿದ್ದು, ಕ್ರೀಡಾ ಮತ್ತು ಸಾಂಸ್ಕೃತಿಕ ವಿಭಾಗದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ವಿಶೇಷ ಆದ್ಯತೆ ನೀಡಿ ಪ್ರತ್ಯೇಕ ಆಯ್ಕೆ ಶಿಬಿರ ನಡೆಸಿ ಆಯ್ಕೆ ಮಾಡಲಾಗುತ್ತದೆ.
35,000ಕ್ಕೂ ಅಧಿಕ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರು ಆಗಮಿಸಿದ್ದರೂ ಬಹಳ ಅಚ್ಚುಕಟ್ಟಿನ ವ್ಯವಸ್ಥೆಯೊಂದಿಗೆ ಪರೀಕ್ಷೆ ನಡೆಸಲಾಗಿದೆ. ವಿದ್ಯಾರ್ಥಿಗಳಿಗೆ ಆಳ್ವಾಸ್ ಸಂಸ್ಥೆಯ ವತಿಯಿಂದ, ವ್ಯವಸ್ಥಿತ ಶೌಚಾಲಯದೊಂದಿಗೆ ಉಚಿತ ತಂಗುವ ವ್ಯವಸ್ಥೆ ಕಲ್ಪಿಸಲಾಗಿತ್ತು.
ಖಾಸಗಿ, ಸರಕಾರಿ ಬಸ್ಸುಗಳ ಸಹಿತ ನೂರಾರು ವಾಹನಗಳು ಆಳ್ವಾಸ್ ಆವರಣ ಸಹಿತ ಮೂಡುಬಿದಿರೆ ಪೇಟೆಯ ಬೀದಿಗಳ ಬದಿ ಪಾರ್ಕ್ ಮಾಡಲಾಗಿತ್ತು. ಸ್ಥಳೀಯ ಹೋಟೆಲ್ ಲಾಡ್ಜ್ ಗಳಲ್ಲಿಯೂ ಅನುಕೂಲವಿದ್ದ ಪೋಷಕರು ಬುಕ್ಕಿಂಗ್ ಮೂಲಕ ಅವಕಾಶ ಪಡೆದುಕೊಂಡಿದ್ದರು.
ಉತ್ತರ ಕರ್ನಾಟಕದ ಬಹುಮಂದಿ ವಾಹನಗಳಲ್ಲಿ ಪಾತ್ರೆ ಪಗಡಿ ಸಹಿತ ಕುಟುಂಬಿಕರಾಗಿ ಆಗಮಿಸಿ ತಾವೇ ಆಹಾರ ಬೇಯಿಸಿಕೊಂಡು ಸೇವಿಸಿ ಮಕ್ಕಳನ್ನು ಪರೀಕ್ಷೆಗೆ ಕಳಿಸಿ ವಿಶ್ರಾಂತಿಗೆ ಜಾರಿದ, ಮತ್ತೆ ಅಪರಾಹ್ನ ಬಿರು ಬಿಸಿಲಿನ ನಡುವೆಯೂ ಪರೀಕ್ಷೆ ಮುಗಿಸಿ ಹೊರ ಬಂದ ಮಕ್ಕಳನ್ನು ಕರೆದೊಯ್ಯಲು ಪರೀಕ್ಷಾ ಕೇಂದ್ರಗಳ ಮುಂದೆ ಗುಂಪುಕಟ್ಟಿ ನಿಂತದ್ದು ವಿಶೇಷವಾಗಿತ್ತು.
ಅಪರಾಹ್ನದ ಬಳಿಕ ಜನವಾಹನ ಸಂದಣಿ ಕರಗಿದ್ದು ಕಟೀಲು, ಧರ್ಮಸ್ಥಳ ಹೀಗೆ ಹತ್ತಿರದ ಪುಣ್ಯಕ್ಷೇತ್ರಗಳ ದರ್ಶನ ಪಡೆದು ಮರಳುವ ಉತ್ಸಾಹವೂ ಅವರಲ್ಲಿ ವ್ಯಕ್ತವಾಯಿತು.
ಕನ್ನಡ ಮಾಧ್ಯಮದ ಉಚಿತ ಶಿಕ್ಷಣ ಸೌಲಭ್ಯದಡಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಶಿಕ್ಷಣ ಶುಲ್ಕ, ವಿದ್ಯಾರ್ಥಿನಿಲಯ, ಪಠ್ಯಪುಸ್ತಕ ಸಂಪೂರ್ಣ ಉಚಿತವಾಗಿ ನೀಡಲಾಗುತ್ತದೆ. ಶಾಲಾ ಶಿಕ್ಷಣದೊಂದಿಗೆ ವಿದ್ಯಾರ್ಥಿಗಳಿಗೆ ಬಾಲ್ಯದಲ್ಲಿಯೇ ಸ್ಪರ್ಧಾತ್ಮಕವಾದ ಬುದ್ಧಿಮತ್ತೆ ಜತೆಗೆ ಸುಸಂಸ್ಕೃತವಾದ ಮನಸ್ಸನ್ನು ಕಟ್ಟುವ ವಿವಿಧ ಚಟುವಟಿಕೆಗಳನ್ನು ಕಲಿಸಲಾಗುತ್ತದೆ.
ಸದ್ಯ ಇಡೀ ಕನ್ನಡ ಮಾಧ್ಯಮ ಶಾಲೆಯಲ್ಲಿ 6ರಿಂದ 10ನೇ ತರಗತಿಯವರೆಗೆ 750ಕ್ಕೂ ಅಧಿಕ ಮಕ್ಕಳಿದ್ದು, ಉಚಿತ ವಸತಿ, ಊಟ ವ್ಯವಸ್ಥೆಯಲ್ಲಿ ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ.
————–
ಕನ್ನಡದ ಸೋಲು ಸಹಿಸಲಾಗದ್ದು: ಡಾ. ಮೋಹನ್ ಆಳ್ವ
ಕನ್ನಡ ಮಾಧ್ಯಮ ಶಾಲೆಗಳು, ನಮ್ಮ ನಾಡಿನ ಭಾಷೆ, ಸಂಸ್ಕೃತಿಯ ಸೋಲು ಎನ್ನುವ ನಿರಾಶೆಯ ಮಾತುಗಳನ್ನು ಸಹಿಸಲು ಸಾಧ್ಯವಿಲ್ಲ. ಅಂತಹ ಸಂದರ್ಭಗಳಲ್ಲಿ ನಮ್ಮ ಪ್ರಯತ್ನ ನಾವು ಮಾಡಲೇ ಬೇಕು. ನಮ್ಮಲ್ಲಿ ಆಂಗ್ಲ ಮಾಧ್ಯಮ, ಸಿಬಿಎಸ್ಸಿ, ಐಸಿಎಸ್ ಪಠ್ಯಕ್ರಮದ ಶಾಲೆಗಳಿವೆ. ಕನ್ನಡ ಮಾಧ್ಯಮವನ್ನೂ ಮಾದರಿಯಾಗಿ ಕಟ್ಟಬೇಕು . ಕಾಲಕ್ಕೆ ಸರಿಯಾಗಿ ಕನ್ನಡ ಮಾಧ್ಯಮ ಶಾಲೆಗಳನ್ನು ಕಟ್ಟಿ ಬೆಳೆಸಿದಾಗ ಅವುಗಳು ಸೋಲಲು ಸಾಧ್ಯವೇ ಇಲ್ಲ ಎನ್ನುವ ಸಂದೇಶ ನೀಡಬೇಕು ಎನ್ನುವ ಆಸೆ ನಮ್ಮದು. ವಾರ್ಷಿಕ ಒಬ್ಬ ವಿದ್ಯಾರ್ಥಿಗೆ ಒಂದೂವರೆ ಲಕ್ಷ ವ್ಯಯಿಸಿ 10 ಕೋಟಿಗೂ ಮಿಕ್ಕಿದ ಖರ್ಚು ಭರಿಸಲಾಗುತ್ತಿದೆ. ಇಂದಿನ ವರೆಗೂ ಶೇ 100 ಫಲಿತಾಂಶದೊಂದಿಗೆ ಶಾಲೆ ನಾಡಿಗೆ ನಂ1 ಆಗಿರುವುದು ಸಂತಸ ತಂದಿದೆ. ಈ ಮಾದರಿಯನ್ನು ಗಮನಿಸಿ ಸಾಧಿಸುವ ಇಚ್ಛಾಶಕ್ತಿಯನ್ನು ಎಲ್ಲರೂ ತೋರಿಸಬೇಕಾಗಿದೆ.
————
ಮೊದಲ ಬಾರಿಗೆ ಪರೀಕ್ಷೆ ಬರೆದ , ಕೆಲವರು ಎರಡನೇ ವರ್ಷವೂ ಅವಕಾಶಕ್ಕಾಗಿ ಪ್ರಯತ್ನಿಸಿದವರು ಹೀಗೆ ಮಕ್ಕಳು ಪರೀಕ್ಷೆ ಬರೆದ ಸಂತಸದಲ್ಲಿ ಕಂಡು ಬಂದರು. ಬಿಜಾಪುರದ ಪ್ರಗತಿ, ಕೋಲಾರದ ರೇಖಾ , ಸವದತ್ತಿಯ ಸಂಜನಾ , ಬಾದಾಮಿಯ ಸಂಗಪ್ಪ, ಪ್ರೇರಣಾ ಹೀಗೆ ಹಲವರು ಪರೀಕ್ಷೆ ಬರೆಯಲು ಸಿಕ್ಕಿದ ಅವಕಾಶಕ್ಕಾಗಿ ಸಂತಸ ವ್ಯಕ್ತಪಡಿಸಿದರು.
ಜ್ಞಾನಕಾಶಿಯ ತುಂಬೆಲ್ಲ ಕನ್ನಡ ವಿದ್ಯಾರ್ಥಿಗಳ ಕಲರವ..
# ನಾಡಿನೆಲ್ಲೆಡೆಯಿಂದ 23401 ಅರ್ಜಿ, ಧಾವಿಸಿ ಬಂದ 20146 ಮಂದಿ ಸಾವಿರ ಮಕ್ಕಳು…# ನಾಡಿನ 32 ಜಿಲ್ಲೆಗಳ ಸಹಿತ ಮಹಾರಾಷ್ಟ್ರ, ಕೇರಳ ಗಡಿ ಭಾಗದಿಂದಲೂ ವಿದ್ಯಾರ್ಥಿಗಳು
# ಆಳ್ವಾಸ್ ಆವರಣದಲ್ಲಿ ಪೋಷಕರು, ಮಕ್ಕಳು ಸೇರಿ 50 ಸಾವಿರಷ್ಟು ಮಂದಿ
# ಪರೀಕ್ಷಾ ಕೇಂದ್ರಗಳತ್ತ ಹರಿದು ಬಂದ ನೂರಾರು ವಾಹನಗಳು, ಬಸ್ಸುಗಳು.
# ಐದು ಕೇಂದ್ರಗಳಲ್ಲಿ ಪರೀಕ್ಷಾ ವ್ಯವಸ್ಥೆ, 1200 ಮೇಲ್ವಿಚಾರಕರು, ಸ್ವಯಂ ಸೇವಕರ ನಿರ್ವಹಣೆ
# ಸಂಸ್ಥೆಯ ವಿವೇಕ್ ಅಳ್ವರ ಮೇಲುಸ್ತುವಾರಿಯಲ್ಲಿ ಸುವ್ಯವಸ್ಥೆ,
# ಬೆಳಗಾವಿಯಿಂದ ಗರಿಷ್ಠ 7353 ಮಂದಿ ಅರ್ಜಿ, ಕೇರಳ ಗಡಿ ಭಾಗದಿಂದಲೂ 2 ಮಂದಿ ಅರ್ಜಿ,
# ದ.ಕ ಜಿಲ್ಲೆಯಿಂದ 37, ಉಡುಪಿಯಿಂದ 12, ಉತ್ತರ ಕನ್ನಡ ದಿಂದ 117 ಅರ್ಜಿಗಳು
——
ಕುರಿ ದನ ಮೇಯಿಸುವ
ಮಕ್ಕಳು ಆಳ್ವಾಸ್ ನಲ್ಲಿ
ಓದಲಿ ಎಂಬಾಸೆ…
ಕರಾವಳಿಯ ಈ ಭಾಗದಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಲಾಗುತ್ತಿದೆ. ಮಕ್ಕಳು ನಮ್ಮ ಉತ್ತರ ಕರ್ನಾಟಕದಲ್ಲಿದ್ದರೆ ಕುರಿ, ದನ ಮೇಯಿಸಲು, ಹೊಲಕ್ಕೆ ದುಡಿಯಲು ಕಳಿಸುವ ವಾತಾವರಣ ಇದೆ. ನಮ್ಮ ಮಕ್ಕಳೂ ಓದಿ ಬೆಳೆಯಬೇಕು ಎಂಬ ಆಸೆಯಿಂದ ಇಲ್ಲಿಗೆ ಬಂದು ಪರೀಕ್ಷೆ ಬರೆಯಲು ಆಸಕ್ತಿ ವಹಿಸುತ್ತಿದ್ದೇವೆ.
ಶಿವಾನಂದ ದರೂರ್ ಬೆಳಗಾವಿ.
ವರದಿ : ಗಣೇಶ್ ಕಾಮತ್ ಮೂಡುಬಿದಿರೆ

