ಇಂದಿನ ಪ್ರೀಮಿಯರ್ ಪದ್ಮಿನಿಯ ಮುತ್ತಜ್ಜಿಯಂತಿರುವ ಈ ಫಿಯೆಟ್ ಕಾರು…
1 min read





ಅವಿನ್ ಟಿವಿ ಸುದ್ದಿಜಾಲ ✒️: ಇಂದಿನ ಪ್ರೀಮಿಯರ್ ಪದ್ಮಿನಿಯ ಮುತ್ತಜ್ಜಿಯಂತಿರುವ ಈ ಫಿಯೆಟ್ ಕಾರು ಭಾರತದ ಒಂದು ಕವಿತೆ ಇದ್ದಂತೆ, ದೇಶದ ಅತ್ಯುನ್ನತ ಸ್ಥಾನವಾದ ಪ್ರಧಾನಮಂತ್ರಿಯ ಹುದ್ದೆಯಲ್ಲಿದ್ದರೂ ಕೂಡ ಐದು ಸಾವಿರ ರೂಪಾಯಿ ಸಾಲದ ಕಂತಿಗಾಗಿ ಅಂದು ಅರ್ಜಿ ಹಿಡಿದು ಸಾಮಾನ್ಯ ಜನರಂತೆ ಪಂಜಾಬ್ ನ್ಯಾಷನಲ್ ಬ್ಯಾಂಕಿನ ಮುಂದೆ ಸರದಿ ಸಾಲಿನಲ್ಲಿ ನಿಂತು ಸಾಲ ಪಡೆದು ಖರೀದಿಸಿದ ಕಾರು ಈ ಫಿಯೆಟ್ ಕಾರು,
ಇದು ಈಗ ಕೇವಲ ಕಾರಾಗಿ ಮಾತ್ರ ಉಳಿದಿಲ್ಲ, ಭಾರತದ ಕವಿತೆಯಾಗಿ, ಸರಳತೆಯ ಪ್ರಾಮಾಣಿಕತೆಯ ಕಾದಂಬರಿಯಾಗಿ, ಇಂದಿನ ಎಲ್ಲ ರಾಜಕಾರಣಿಗಳಿಗೆ ನೈತಿಕತೆಯ ಪಾಠವಾಗಿ ಲಾಲ್ ಬಹುದ್ದೂರ್ ಶಾಸ್ತ್ರಿಜೀ ಅವರ ಒಂದು ಘನ ವ್ಯಕ್ತಿತ್ವವಾಗಿ ಜಗತ್ತಿನ ಮುಂದೆ ಪ್ರಾಮಾಣಿಕತೆಯ ಸಂಕೇತದಂತೆ, ಇಂದಿಗೂ ಸ್ತುಸ್ಥಿತಿಯಲ್ಲಿ ನಿಂತಿದೆ.
ವೈಭೋಗದ ಜೀವನವೇ ಘನತೆಯ ಬದುಕು ಎಂದು ತಿಳಿದುಕೊಂಡಿರುವ ಭ್ರಷ್ಟ ರಾಜಕಾರಣಿಗಳೆಲ್ಲ ತಮ್ಮ ಮೈ ಮನದ ಮೇಲಿರುವ ದೂಳನ್ನು ಕೊಡವಿಕೊಂಡು ಈ ಕಾರಿನ ಸುತ್ತ ಒಮ್ಮೆ ಪ್ರದಕ್ಷಣೆ ಹಾಕಿ ಬರಬೇಕಾಗಿದೆ.
ಶಾಸ್ತ್ರೀಜಿಯವರ ಬಗ್ಗೆ ವಿಶ್ವವಾಣಿಯಲ್ಲಿ ಪ್ರಕಟಿತವಾದ ವಿಶ್ವೇಶ್ವರ ಭಟ್ಟರ ಲೇಖನವೊಂದನ್ನು ಅವಿನ್ ಟಿವಿ ಸುದ್ದಿಜಾಲವು ತನ್ನ ಓದುಗರಿಗಾಗಿ ಕೊಡ ಮಾಡುತ್ತಿದೆ.
••••••••••••••••
*ಡಿಎಲ್ಇ 6 ನಂಬರಿನ ಒಂದು ಫಿಯಟ್ ಕಾರಿನ ಕತೆ !*
ಮೊನ್ನೆ ದಿಲ್ಲಿಗೆ ಹೋದಾಗ ದಿವಂಗತ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಮಗ ಸುನಿಲ್ ಶಾಸ್ತ್ರಿಯವರನ್ನು ಭೇಟಿ ಮಾಡಲೆಂದು, 1, ಮೋತಿಲಾಲ ನೆಹರು ಮಾರ್ಗದಲ್ಲಿರುವ ‘ಶಾಸ್ತ್ರಿ ಸ್ಮಾರಕ ಭವನ’ಕ್ಕೆ ಹೋಗಿದ್ದೆ. ಇದು ಶಾಸ್ತ್ರಿಯವರು ಪ್ರಧಾನಿಯಾಗಿದ್ದಾಗ ಅವರ ಅಧಿಕೃತ ನಿವಾಸವೂ ಆಗಿತ್ತು. ಅವರ ನಿಧನದ ಬಳಿಕ ಇದನ್ನು ಶಾಸ್ತ್ರಿಯವರ ಸ್ಮರಣಾರ್ಥ ಸ್ಮಾರಕ ಮತ್ತು ವಸ್ತು ಸಂಗ್ರಹಾಲಯವನ್ನಾಗಿ ಪರಿವರ್ತಿಸಲಾಗಿದೆ. ನಾನು ದಿಲ್ಲಿಗೆ ಹೋದಾಗಲೆಲ್ಲ ಸಾಮಾನ್ಯವಾಗಿ ಅವರನ್ನು ಭೇಟಿ ಮಾಡುತ್ತೇನೆ. ಕಳೆದ ಇಪ್ಪತ್ತು ವರ್ಷಗಳಿಂದ ಅವರೊಂದಿಗೆ ನನ್ನದು ಅವಿನಾಭಾವ ಸಂಬಂಧ. ಬೆಂಗಳೂರಿಗೆ ಬಂದಾಗಲೆಲ್ಲ ಅವರು ನನ್ನ ಮನೆಗೆ ತಪ್ಪದೇ ಬರುತ್ತಾರೆ.
ಸುನಿಲ್ ಶಾಸ್ತ್ರಿಯವರು ಇನ್ನೊಂದು ‘ವಿಶೇಷ ಕಾರಣ’ಕ್ಕೆ ನನ್ನನ್ನು ತಪ್ಪದೇ ನೆನಪಿಸಿಕೊಳ್ಳುತ್ತಾರೆ. ಸುಮಾರು ಹದಿನೆಂಟು ವರ್ಷಗಳ ಹಿಂದೆ, ಶಾಸ್ತ್ರಿಯವರು ಯಲ್ಲಾಪುರದ ‘ಸ್ನೇಹಸಾಗರ’ ವಸತಿ ಶಾಲೆಯ ವಾರ್ಷಿಕೋತ್ಸವದಲ್ಲಿ ಪಾಲ್ಗೊಳ್ಳಲೆಂದು ದಿಲ್ಲಿಯಿಂದ ಬೆಂಗಳೂರಿಗೆ ಬಂದು, ಅಲ್ಲಿಂದ ಹುಬ್ಬಳ್ಳಿಗೆ ಆಗಮಿಸಿ, ನಂತರ ರಸ್ತೆ ಮೂಲಕ ಯಲ್ಲಾಪುರಕ್ಕೆ ಬಂದು, ಸ್ಥಳೀಯ ‘ಬನಾನ ಕೌಂಟಿ’ ರೆಸಾರ್ಟಿನಲ್ಲಿ ತಂಗಿದ್ದರು. ಬೆಳಗ್ಗೆ ಹತ್ತು ಗಂಟೆಗೆ ಕಾರ್ಯಕ್ರಮ. ನಾನು ಬೆಳಗ್ಗೆ ಏಳೂವರೆಗೆ ಅವರ ರೂಮಿಗೆ ಹೋದರೆ, ಶಾಸ್ತ್ರಿಯವರು ನಿತ್ರಾಣರಾಗಿ ಹಾಸಿಗೆಯ ಮೇಲೆ ಮಲಗಿದ್ದರು. ಪಕ್ಕದಲ್ಲಿ ಅವರ ಪತ್ನಿ ಮೀರಾ ತುಸು ಚಿಂತಾಕ್ರಾಂತರಾಗಿದ್ದರು. ‘ಬೆಳಗಿನಿಂದ ಆರು ಸಲ ಟಾಯ್ಲೆಟ್ಟಿಗೆ ಹೋಗಿ ಬಂದರು… ಯಜಮಾನರಿಗೆ ಲೂಸ್ ಮೋಷನ್’ ಎಂದರು. ಆಗ ಶಾಸ್ತ್ರಿಯವರು, ‘ವಿಶೇಶ್ವರ್, ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲೆಂದು ನಾನು ದೂರದ ದಿಲ್ಲಿಯಿಂದ ಬಂದೆ. ನನ್ನ ತಂದೆಯವರ ಬಗ್ಗೆ ವಿದ್ಯಾರ್ಥಿಗಳಿಗೆ ಹೇಳಬೇಕು ಎಂದು ಅಂದುಕೊಂಡಿದ್ದೆ. ಈಗ ನನ್ನ ಪರಿಸ್ಥಿತಿ ಹೇಗಿದೆ ಅಂದ್ರೆ ನನಗೆ ಎದ್ದು ನಿಲ್ಲಲು ಆಗುತ್ತಿಲ್ಲ, ಅಷ್ಟೊಂದು ಸುಸ್ತು… ನಾನು ಇಂದಿನ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಡೌಟು’ ಎಂದರು.
ಶಾಸ್ತ್ರಿಯವರು ನಿಶ್ಯಕ್ತರಾಗಿದ್ದರು. ಏನೇ ಸೇವಿಸಿದರೂ ನಿಲ್ಲುತ್ತಿರಲಿಲ್ಲ. ತಕ್ಷಣ ನನ್ನ ತಾಯಿ ಸದಾ ಹೇಳುತ್ತಿದ್ದ ‘ರಾಮಬಾಣ’ದಂಥ ಮನೆ ಔಷಧ ನೆನಪಾಯಿತು. ‘ಶಾಸ್ತ್ರಿ ಅವರೇ, ಚಿಂತೆ ಬೇಡ. ನಾನು ಒಂದು ಔಷಧ ಕೊಡ್ತೇನೆ. ನೀವು ಅರ್ಧ ಗಂಟೆಯಲ್ಲಿ ಎಂದಿನಂತೆ ಠಾಕು-ಠೀಕಾಗುತ್ತೀರಿ’ ಎಂದೆ. ನಾನು ಏನು ಕೊಟ್ಟರೂ ಸೇವಿಸುವ ಮನಸ್ಥಿತಿಯಲ್ಲಿದ್ದ ಶಾಸ್ತ್ರಿಯವರು, ಆ ಔಷಧವನ್ನು ಕೊಡುತ್ತಿದ್ದಂತೆ, ಗಟಗಟನೆ ಕುಡಿದುಬಿಟ್ಟರು. ‘ನೋಡೋಣ ವಿಶ್ವೇಶ್ವರ್….ಎಲ್ಲ ಸರಿ ಹೋಗಬಹುದು’ ಎಂದು ಸಮಾಧಾನಪಟ್ಟರು. ‘ಅರ್ಧ ಗಂಟೆ ಮಲಗಿ ವಿಶ್ರಾಂತಿ ತೆಗೆದುಕೊಳ್ಳಿ’ ಎಂದು ನಾನು ನನ್ನ ರೂಮಿಗೆ ಬಂದೆ.
ಅದಾಗಿ ಮುಕ್ಕಾಲು ಗಂಟೆ ನಂತರ, ಯಾರೋ ನನ್ನ ರೂಮಿನ ಬಾಗಿಲು ಬಡಿದ ಸದ್ದು. ನೋಡಿದರೆ ಸುನಿಲ್ ಶಾಸ್ತ್ರಿಯವರು!
‘ವಿಶ್ವೇಶ್ವರ್.. ಅದೆಂಥ ಪವಾಡ ಮಾಡಿಬಿಟ್ಟಿರಿ ನೀವು. ನಾನು ಈಗ ಆಲ್ ರೈಟ್. ಇಂದಿನ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಿದ್ಧನಾಗಿದ್ದೇನೆ ನೋಡಿ. ನೀವು ಕೊಟ್ಟ ಔಷಧ ನನ್ನ ಮೇಲೆ ತಕ್ಷಣ ಪರಿಣಾಮ ಬೀರಿದೆ. ನಾನು ಭಾಷಣಕ್ಕೆ ಸಿದ್ಧನಾಗಿದ್ದೇನೆ’ ಎಂದರು. ನಾನು ಕೊಟ್ಟ ಔಷಧ ನಿಶ್ಚೇತನರಾಗಿ ಹಾಸಿಗೆ ಮೇಲೆ ಬಿದ್ದಿದ್ದ ಅವರನ್ನು ಆ ಪರಿ ಎದ್ದು ನಿಲ್ಲಿಸಿತ್ತು. ಅಂದು ಶಾಸ್ತ್ರಿಯವರು ಸುಮಾರು ಒಂದೂಕಾಲು ಗಂಟೆ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತಾಡಿದ್ದರು. ಅದಾಗಿ ಎರಡು ವರ್ಷಗಳ ಬಳಿಕ ಅವರು ಉತ್ತರ ಪ್ರದೇಶದಲ್ಲಿ ಪ್ರವಾಸದಲ್ಲಿದ್ದಾಗ ಮತ್ತೆ ಅದೇ ಸಮಸ್ಯೆ ತಲೆದೋರಿತ್ತು. ಆಗ ಅವರು ನನಗೆ ಅಲ್ಲಿಂದ ಫೋನ್ ಮಾಡಿ ಕ್ಷೀಣ ದನಿಯಲ್ಲಿ, ‘ಅಂದು ನೀವು ಕೊಟ್ಟ ಔಷಧ ಏನು? ಮತ್ತೆ ಅದೇ ಸಮಸ್ಯೆಯಿಂದ ಬಳಲುತ್ತಿದ್ದೇನೆ’ ಎಂದರು. ನಾನು ಅವರಿಗೆ ವಿವರಿಸಿದೆ. ನಂತರ ಅವರ ಫೋನ್ ಬಂದಾಗಲೆಲ್ಲ, ‘ಏನ್ ಸಾರ್, ಲೂಸ್ ಮೋಶನ್ನಾ?’ ಎಂದು ಕೇಳುತ್ತಿದ್ದೆ. ಶಾಸ್ತ್ರಿಯವರು ಜೋರಾಗಿ ನಗುತ್ತಿದ್ದರು. ‘ಆಗ ಮಾತ್ರ ಅಲ್ಲ, ಬೇರೆ ಸಂದರ್ಭಗಳಲ್ಲೂ ನಿಮ್ಮನ್ನು ನೆನಪಿಸಿಕೊಳ್ಳುತ್ತೇನೆ…ಆದರೆ ಆ ಸಂದರ್ಭ ಬಂದರೆ ನಿಮ್ಮನ್ನು ಮರೆಯುವುದಿಲ್ಲ’ ಎಂದು ಅವರು ಹೇಳುತ್ತಿದ್ದರು.
ನಾನು ಲಾಲ ಬಹಾದ್ದೂರ್ ಶಾಸ್ತ್ರಿಯವರನ್ನು ನೋಡಿಲ್ಲ. ಆದರೆ ಸುನಿಲ್ ಶಾಸ್ತ್ರಿ ಜತೆ ಮಾತಿಗೆ ಕುಳಿತುಕೊಂಡರೆ, ಅವರ ತಂದೆಯವರೇ ಮಾತಾಡುತ್ತಿದ್ದಾರೇನೋ ಎಂದು ಅನಿಸುವುದು ಸುಳ್ಳಲ್ಲ. ಅದರಲ್ಲೂ ಅವರ ತಂದೆಯ ಬಗ್ಗೆ ಪ್ರಸ್ತಾಪಿಸಿದರೆ ಸಾಕು, ಅವರು ನೆನಪಿನ ಬುತ್ತಿಯನ್ನೇ ನಮ್ಮ ಮುಂದೆ ಹರವಿಬಿಡುತ್ತಾರೆ. ಮುಂದಿನ ಎರಡು ಗಂಟೆ ಸರಿದಿದ್ದೇ ಗೊತ್ತಾಗುವುದಿಲ್ಲ. ನಾನು ಪ್ರತಿ ಸಲ ಅವರನ್ನು ಭೇಟಿಯಾದಾಗಲೂ ಅವರು ಹೇಳುವ ಪ್ರಸಂಗಗಳನ್ನು ಬರೆದಿಟ್ಟುಕೊಂಡಿದ್ದರೆ, ಅದೇ ಒಂದು ಪುಸ್ತಕವಾಗುತ್ತಿತ್ತು. ಮೂರು ವರ್ಷಗಳ ಹಿಂದೆ, ಲಾಲ್ ಬಹಾದೂರ್ ಶಾಸ್ತ್ರಿ ಅವರು ನಿಧನರಾದ ಉಜಬೆಕಿಸ್ತಾನದ ತಾಷ್ಕೆಂಟ್ ನಲ್ಲಿರುವ ಅವರ ಪ್ರತಿಮೆಯ ಮುಂದೆ ನಿಂತು, ಸುನಿಲ್ ಶಾಸ್ತ್ರಿ ಅವರೊಂದಿಗೆ ಮೊಬೈಲ್ ನಲ್ಲಿ ಕರೆ ಮಾಡಿದಾಗ ಅವರು ಗದ್ಗದಿತರಾಗಿದ್ದರು.
ಮೊನ್ನೆ ನಾನು ಅವರನ್ನು ಭೇಟಿ ಮಾಡಲೆಂದು ದಿಲ್ಲಿಯಲ್ಲಿರುವ ಶಾಸ್ತ್ರಿ ಸ್ಮಾರಕ ಭವನಕ್ಕೆ ಅರ್ಧ ಗಂಟೆ ಮುಂಚಿತವಾಗಿ ಹೋಗಿದ್ದೆ. ಸುನಿಲ್ ಶಾಸ್ತ್ರಿಯವರು ಇನ್ನೂ ಬಂದಿರಲಿಲ್ಲ. ಅಲ್ಲಿನ ನೌಕರರು, ‘ಶಾಸ್ತ್ರಿಯವರು ಇನ್ನೇನು ಬರುತ್ತಾರೆ, ಇಲ್ಲಿ ಕುಳಿತುಕೊಳ್ಳಿ’ ಇಂದು ಹೇಳಿದರು. ಆದರೆ ನನಗೆ ಕುಳಿತುಕೊಳ್ಳಲು ಮನಸ್ಸಾಗಲಿಲ್ಲ. ಶಾಸ್ತ್ರಿಯವರ ವಸ್ತು ಸಂಗ್ರಹಾಲಯದಲ್ಲಿಟ್ಟ ಫೋಟೋ, ಅವರು ಬಳಸುತ್ತಿದ್ದ ವಸ್ತುಗಳು, ಪೀಠೋಪಕರಣಗಳನ್ನೆಲ್ಲ ನೋಡುತ್ತಾ ಒಂದು ಸುತ್ತು ಹಾಕಿ, ಭವನದ ಒಂದು ಪಾರ್ಶ್ವದಲ್ಲಿ ನಿಲ್ಲಿಸಿರುವ ಕಾರಿನ ಕಡೆಗೆ ಹೋದೆ. ಚಾವಣಿಯ ಕೆಳಗೆ ಆ ಕಾರನ್ನು ಸುತ್ತಲೂ ಗ್ಲಾಸಿನ ಕವಚ ಹೊದಿಸಿ ನಿಲ್ಲಿಸಿದ್ದರು. ಆ ಕಾರನ್ನು ನೋಡುತ್ತಿದ್ದಂತೆ ನನ್ನ ಮನಸ್ಸು ಸುಮಾರು ಅರವತ್ತು ವರ್ಷಗಳ ಹಿಂದೆ ಹೋಗಿ ನಿಂತಿತು.
ಒಂದು ಕಾಲಕ್ಕೆ ದೇಶದ ಪ್ರಧಾನಿ ವಾಸಿಸಿದ, ಓಡಾಡಿದ ಆ ಬಂಗಲೆಯ ಆವರಣದಲ್ಲಿ, ಕಾಲದ ಧೂಳನ್ನು ಕೊಡವಿಕೊಂಡು ನಿಂತಿರುವ ಆ ಗೋದಿ ಬಣ್ಣದ ಫಿಯೆಟ್ ಕಾರನ್ನು ನೋಡಿದಾಗ, ತೀರಿಸಲಾಗದ ಪ್ರೀತಿಯ ಸಾಲವೊಂದನ್ನು ಎದೆಯಲ್ಲಿ ಇಟ್ಟುಕೊಂಡು ಮೌನವಾಗಿ ಧ್ಯಾನಕ್ಕೆ ಕುಳಿತಿರುವ ಒಬ್ಬ ಹಿರಿಯ ಜೀವದಂತೆ ಭಾಸವಾಯಿತು. ಇವತ್ತಿನ ಕಾಲದಲ್ಲಿ ಅಧಿಕಾರವೆಂದರೆ ವಿಮಾನದ ರೆಕ್ಕೆಗಳ ಮೇಲೆ ಹಾರಾಡುವ ಅಹಂಕಾರ. ಆದರೆ, ಅಂದು ದೇಶದ ಪ್ರಧಾನಿಯೊಬ್ಬರು ಐದು ಸಾವಿರ ರುಪಾಯಿಯ ಸಾಲದ ಕಂತಿಗಾಗಿ ಅರ್ಜಿ ಹಿಡಿದು ಬ್ಯಾಂಕಿನ ಮುಂದೆ ನಿಂತಿದ್ದರಲ್ಲ, ಆ ನೈತಿಕತೆಯೇ ಈ ಕಾರಿನ ನಿಜವಾದ ಎಂಜಿನ್.
ಕಾರಿನ ಒಳಗೆ ಇಣುಕಿ ನೋಡಿದರೆ, ಆ ಸೀಟುಗಳ ಮೇಲೆ ಇಂದಿಗೂ ಒಬ್ಬ ಮನುಷ್ಯನ ಸರಳತೆಯ ವಾಸನೆ ಉಳಿದುಕೊಂಡಿದೆಯೆನೋ ಎನಿಸಿತು. ಆ ಕಾರಿನ ವಿಂಡೋ ಗ್ಲಾಸುಗಳ ಮೂಲಕ ಒಳಗೆ ನೋಡಿದರೆ, ದೇಶದ ಪ್ರಧಾನಿಗೆ ಇಷ್ಟು ಸಣ್ಣ ಇಲಿ ಗಾತ್ರದ ಕಾರನ್ನು ಖರೀದಿಸಲು ಸಾಧ್ಯವಾಗದೇ, ಸಾಲ ಮಾಡ ಬೇಕಾದ ಪರಿಸ್ಥಿತಿ ಬಂದಿತ್ತಲ್ಲ ಎಂಬ ಪ್ರಸಂಗ ಹಾದು ಹೋಯಿತು. ಈ ಕಾರು ಇಂದಿಗೂ ಸುಸ್ಥಿತಿಯಲ್ಲಿದೆ ಎನ್ನುವುದೇ ಒಂದು ವಿಸ್ಮಯ. ಬಹುಶಃ ಲಲಿತಾ ಶಾಸ್ತ್ರಿಯವರು ತಮ್ಮ ಪಿಂಚಣಿಯ ಹಣದಲ್ಲಿ ಕಟ್ಟಿದ ಆ ಸಾಲದ ಪ್ರತಿ ಕಂತಿನಲ್ಲೂ ಒಂದು ತಾಯಿಯ ಮಮತೆ ಇತ್ತು. ಆ ಮಮತೆಯೇ ಈ ಕಬ್ಬಿಣದ ಚೌಕಟ್ಟಿಗೆ ತುಕ್ಕು ಹಿಡಿಯದಂತೆ ಕಾಪಾಡುತ್ತಿರಬಹುದು. ಇವತ್ತಿನ ಬೃಹತ್ ಎಸ್‌ಯುವಿಗಳ ಅಬ್ಬರದ ನಡುವೆ, ಈ ಪುಟ್ಟ ಫಿಯೆಟ್ ಕಾರು ಒಂದು ಕವಿತೆಯಂತೆ ನಿಂತಂತೆ ಭಾಸವಾಯಿತು.
ಅದು ಲಾಲ್ ಬಹದ್ದೂರ್ ಶಾಸ್ತ್ರಿಯವರು ಬಳಸುತ್ತಿದ್ದ ಕಾರು! 1964ರ ಮಾಡೆಲ್‌ನ ಫಿಯೆಟ್ 1100 ಡಿಲೈಟ್. ಈ ಕಾರು ಅಂದು ಭಾರತದ ರಸ್ತೆಗಳಲ್ಲಿ ಅತ್ಯಂತ ಜನಪ್ರಿಯವಾಗಿತ್ತು ಮತ್ತು ಅಂದು ಮಧ್ಯಮ ವರ್ಗದ ಜನರ ಕನಸಿನ ವಾಹನವಾಗಿತ್ತು. ಈ ಕಾರನ್ನು ಖರೀದಿಸಬೇಕೆಂದರೂ ಮಾರುಕಟ್ಟೆಯಲ್ಲಿ ಸಿಗುತ್ತಿರಲಿಲ್ಲ. ಅದಕ್ಕಾಗಿ ತಿಂಗಳುಗಟ್ಟಲೆ ಕಾಯಬೇಕಿತ್ತು. ಹಾಗೆಂದು ಆ ಕಾರು ಈಗಿನ ಮಾರುತಿ 800 ಕಾರಿನ ತಮ್ಮನೋ, ಟಾಟಾ ನ್ಯಾನೋ ಕಾರಿನ ಅಣ್ಣನೋ, ಇದ್ದಂತಿತ್ತು. ಅದರ ಟೈರುಗಳು ಬಹಳ ಬಾರೀಕ ಇದ್ದವು. ಸ್ಟಿಯರಿಂಗ್ ಗೇ ಗಿಯರ್ ಹ್ಯಾಂಡಲ್ ಅಂಟಿಕೊಂಡಿತ್ತು.
1964ರಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿಯವರು ಪ್ರಧಾನಿಯಾಗಿದ್ದಾಗ ಅವರ ಬಳಿ ಅವರದ್ದು ಎನ್ನುವ ಸ್ವಂತ ಕಾರು ಇರಲಿಲ್ಲ. ಅವರು ತಮ್ಮ ಸ್ವಂತ ಕೆಲಸಗಳಿಗೆ ಸರಕಾರಿ ಕಾರನ್ನು ಬಳಸುತ್ತಿರಲಿಲ್ಲ. ಮಕ್ಕಳನ್ನು ಶಾಲೆಗೆ ಬಿಡಲು, ಕರೆದುಕೊಂಡು ಬರಲು ಸರಕಾರಿ ವಾಹನ ಬಳಸುವುದನ್ನು ಅವರು ಇಷ್ಟಪಡುತ್ತಿರಲಿಲ್ಲ. ಕೆಲವು ಅಧಿಕೃತ ಕಾರ್ಯಕ್ರಮಗಳಿಗೆ ಪತ್ನಿಯನ್ನು ಕರೆದುಕೊಂಡು ಹೋದರೂ, ಮಕ್ಕಳನ್ನು ಕರೆದುಕೊಂಡು ಹೋಗುತ್ತಿರಲಿಲ್ಲ. ಹೆಂಡತಿಯೊಬ್ಬಳೇ ಹೋಗುವ ಸಂದರ್ಭದಲ್ಲಿ ಸರಕಾರಿ ವಾಹನವನ್ನು ಬಳಸುವುದನ್ನು ಅವರು ಸಮ್ಮತಿಸುತ್ತಿರಲಿಲ್ಲ. ಪ್ರಧಾನಿಯ ಮಕ್ಕಳು ಶಾಲೆಗೆ ನಡೆದುಕೊಂಡು ಹೋಗಬೇಕಾಗಿತ್ತು. ಇದಕ್ಕೆ ಶಾಸ್ತ್ರಿಯವರಿಗೆ ಪಶ್ಚಾತ್ತಾಪವಿರಲಿಲ್ಲ. ಆದರೆ ತಮ್ಮ ಕಟ್ಟುಪಾಡಿನಿಂದಾಗಿ ಕುಟುಂಬದವರಿಗೆ ತೊಂದರೆಯಾಗುವುದು ಶಾಸ್ತ್ರಿಯವರ ಗಮನಕ್ಕೆ ಬಂದಿತ್ತು. ಒಮ್ಮೆ ಶಾಸ್ತ್ರಿಯವರ ಮಗ ಸುನಿಲ್ ಶಾಸ್ತ್ರಿ ತಂದೆಗೆ ತಿಳಿಯದಂತೆ, ಪ್ರಧಾನಿ ಕಚೇರಿಯ ಕಾರನ್ನು (ಸರಕಾರಿ ಕಾರು) ಖಾಸಗಿ ಕೆಲಸಕ್ಕಾಗಿ ಬಳಸಿದ್ದರು. ಇದು ತಿಳಿದ ಶಾಸ್ತ್ರಿಯವರು ತಕ್ಷಣವೇ ತಮ್ಮ ಚಾಲಕನನ್ನು ಕರೆಸಿ, ಕಾರು ಎಷ್ಟು ಕಿಲೋಮೀಟರ್ ಓಡಿದೆ ಎಂದು ಕೇಳಿದರು. ನಂತರ, ಆ ದೂರಕ್ಕೆ ತಗಲುವ ಪೆಟ್ರೋಲ್ ವೆಚ್ಚವನ್ನು ಲೆಕ್ಕ ಹಾಕಿ, ತಮ್ಮ ಸ್ವಂತ ಹಣದಿಂದ ಸರಕಾರಿ ಖಜಾನೆಗೆ ಆ ಹಣವನ್ನು ಜಮೆ ಮಾಡಿದ್ದರು.
ಓಡಾಟಕ್ಕೆ ಸ್ವಂತ ಕಾರು ಇಲ್ಲದಿದ್ದರೆ ತಮ್ಮ ಕುಟುಂಬದ ಸದಸ್ಯರಿಗೆ ತೊಂದರೆಯಾಗುವುದನ್ನು ಅರಿತುಕೊಂಡ ಶಾಸ್ತ್ರಿಯವರು, ಒಂದು ಕಾರನ್ನು ಖರೀದಿಸಲು ನಿರ್ಧರಿಸಿದರು. ಆಗ ಆ ಫಿಯೆಟ್ ಕಾರಿನ ಬೆಲೆ ಹನ್ನೆರಡು ಸಾವಿರ ರುಪಾಯಿಗಳು!
ಆದರೆ, ದೇಶದ ಪ್ರಧಾನಿಯ ಬ್ಯಾಂಕ್ ಖಾತೆಯಲ್ಲಿದ್ದದ್ದು ಕೇವಲ ಏಳು ಸಾವಿರ ರುಪಾಯಿಗಳು! ಶಾಸ್ತ್ರಿಯವರು ತಮ್ಮ ಸ್ನೇಹಿತರ ಬಳಿ ಕೇಳಿದ್ದಿದ್ದರೆ ಯಾರೂ ಇಲ್ಲವೆನ್ನುತ್ತಿರಲಿಲ್ಲ. ಪ್ರಧಾನಿಗೆ ಸಾಲ ಕೊಡುವುದು ಪ್ರತಿಷ್ಠೆಯ ವಿಷಯ ಎಂದು ಭಾವಿಸುತ್ತಿದ್ದರು ಅಥವಾ ಪ್ರಧಾನಿ ಮನೆ ಮುಂದೆ ಅದಕ್ಕಿಂತ ಉತ್ತಮವಾದ ಕಾರನ್ನು ನಿಲ್ಲಿಸಿರುತ್ತಿದ್ದರು. ಆದರೆ ಶಾಸ್ತ್ರಿಯವರು ಉಳಿದ ಐದು ಸಾವಿರ ರುಪಾಯಿಗಳಿಗಾಗಿ, ಯಾರಿಗೂ ಹೇಳಲಿಲ್ಲ. ಪಂಜಾಬ್ ನ್ಯಾಷನಲ್ ಬ್ಯಾಂಕ್ ನಿಂದ ಸಾಲ ಪಡೆಯಲು ನಿರ್ಧರಿಸಿದರು. ದೇಶದ ಅತ್ಯುನ್ನತ ಅಧಿಕಾರದಲ್ಲಿರುವ ವ್ಯಕ್ತಿ ಕಾರಿಗಾಗಿ ಬ್ಯಾಂಕ್ ಸಾಲಕ್ಕೆ ಅರ್ಜಿ ಹಾಕಲು ತೀರ್ಮಾನಿಸಿದರು!
‘ನಾನು ಪ್ರಧಾನಿ ಎಂಬ ಕಾರಣಕ್ಕೆ ಯಾವ ರಿಯಾಯತಿಯನ್ನೂ ನೀಡಕೂಡದು, ಬ್ಯಾಂಕಿನ ನಿಯಮಗಳನ್ನು ಪಾಲಿಸಬೇಕು’ ಎಂದು ಶಾಸ್ತ್ರಿಯವರು ಕಟ್ಟಪ್ಪಣೆ ವಿಧಿಸಿದರು. ಅಷ್ಟು ಸಣ್ಣ ಮೊತ್ತಕ್ಕೆ ಪ್ರಧಾನಿಯವರಿಗೆ ಸಾಲ ನೀಡಿದರೆ ಬ್ಯಾಂಕಿನ ಅಧ್ಯಕ್ಷರ ಕೆಂಗಣ್ಣಿಗೆ ಗುರಿಯಾಗಬೇಕಾದೀತೆಂದು ಭಾವಿಸಿದ ಬ್ಯಾಂಕ್ ಮ್ಯಾನೇಜರ್, ತಮ್ಮ ಮೇಲಾಧಿಕಾರಿಯನ್ನು ಸಂಪರ್ಕಿಸಿದರು. ಅವರು ಪ್ರಧಾನಿ ಕಚೇರಿಯಲ್ಲಿರುವ ಅಧಿಕಾರಿಯನ್ನು ಸಂಪರ್ಕಿಸಿದರು. ‘ಈ ವಿಷಯದಲ್ಲಿ ಯಾವ ಕಾರಣಕ್ಕೂ ಪ್ರಧಾನಿ ಅವರ ಮನಸ್ಸನ್ನು ಬದಲಿಸಲು ಸಾಧ್ಯವಿಲ್ಲ. ನೀವು ಅವರಿಗೆ ಐದು ಸಾವಿರ ರುಪಾಯಿ ಸಾಲ ಮಂಜೂರು ಮಾಡಿ’ ಎಂದು ಅವರು ಹೇಳಿದರು. ಬ್ಯಾಂಕ್ ಅಧಿಕಾರಿಗಳಿಗೆ ಬೇರೆ ದಾರಿಯೇ ಇರಲಿಲ್ಲ. ಅವರು ದೇಶದ ಪ್ರಧಾನಿಗೆ ಸಾಲ ಮಂಜೂರು ಮಾಡಿದರು.
ಶಾಸ್ತ್ರಿಯವರು ಅರ್ಜಿ ಸಲ್ಲಿಸಿದ ದಿನವೇ ಸಾಲ ಮಂಜೂರಾಯಿತು. ಆದರೆ ಶಾಸ್ತ್ರಿಯವರು, ‘ಸಾಮಾನ್ಯ ಜನರಿಗೆ ಎಷ್ಟು ವೇಗವಾಗಿ ಸಾಲ ಸಿಗುತ್ತದೆಯೋ ಅಷ್ಟೇ ವೇಗವಾಗಿ ನನಗೂ ಸಿಗಲಿ, ವಿಶೇಷ ಸೌಲಭ್ಯ ಬೇಡ’ ಎಂದು ಸೂಚಿಸಿದ್ದರು. (ಪಂಜಾಬ್ ನ್ಯಾಷನಲ್ ಬ್ಯಾಂಕ್ ಇಂದಿಗೂ ಶಾಸ್ತ್ರಿಯವರು ಸಹಿ ಮಾಡಿದ ಆ ಸಾಲದ ಪತ್ರಗಳನ್ನು ಮತ್ತು ಮರುಪಾವತಿಯ ದಾಖಲೆಗಳನ್ನು ತನ್ನ ‘ಹೆರಿಟೇಜ್ ಗ್ಯಾಲರಿ’ಯಲ್ಲಿ ಅತ್ಯಂತ ಗೌರವದಿಂದ ಕಾಪಾಡಿಕೊಂಡು ಬಂದಿರುವುದು ಬೇರೆ ಕತೆ.)
ಕೊನೆಗೂ ಪಿಯಟ್ ಕಾರು ಬಂದಿತು! ಕಾರಿನ ನಂಬರ್ DLE 6! ಅದು ಆ ಕಾಲದ ಇಟಾಲಿಯನ್ ವಿನ್ಯಾಸದ ‘ಪ್ರೀಮಿಯರ್ ಪದ್ಮಿನಿ’ಯ ಮುಂಚಿನ ಆವೃತ್ತಿ. ಕಾರಿನ ಒಳಾಂಗಣ ತೀರಾ ಸರಳವಾಗಿತ್ತು. ಯಾವುದೇ ಐಷಾರಾಮಿ ಸೌಲಭ್ಯಗಳಿರಲಿಲ್ಲ. ಅಷ್ಟಕ್ಕೂ ಆ ಕಾರಿನಲ್ಲಿ ಹವಾ ನಿಯಂತ್ರಣ (ಎಸಿ)ವೂ ಇರಲಿಲ್ಲ.
ದುರದೃಷ್ಟವಶಾತ್, ಕಾರು ಖರೀದಿಸಿದ ಕೇವಲ ಒಂದು ವರ್ಷದೊಳಗೆ, ಅಂದರೆ 1966ರ ಜನವರಿ 11ರಂದು ಅಂದಿನ ಅವಿಭಜಿತ ರಷ್ಯಾದ ತಾಷ್ಕೆಂಟ್‌ನಲ್ಲಿ ಶಾಸ್ತ್ರಿಯವರು ನಿಗೂಢವಾಗಿ ನಿಧನರಾದರು. ಆಗ ಬ್ಯಾಂಕ್ ಸಾಲ ಇನ್ನೂ ಬಾಕಿ ಇತ್ತು.
ಶಾಸ್ತ್ರಿಯವರ ನಿಧನದ ನಂತರ ಅಂದಿನ ಇಂದಿರಾ ಗಾಂಧಿಯವರ ಸರಕಾರ ಆ ಸಾಲವನ್ನು ಮನ್ನಾ ಮಾಡಲು ಮುಂದಾಯಿತು. ಆದರೆ ಶಾಸ್ತ್ರಿಯವರ ಪತ್ನಿ ಲಲಿತಾ ಶಾಸ್ತ್ರಿ ಅದನ್ನು ನಿರಾಕರಿಸಿದರು. ‘ನನ್ನ ಪತಿ ಪ್ರಾಮಾಣಿಕವಾಗಿ ಬದುಕಿದವರು, ಅವರ ಹೆಸರಿನಲ್ಲಿ ಸಾಲ ಉಳಿಯಬಾರದು. ನನ್ನ ಪತಿ ಮಾಡಿದ ಸಾಲವನ್ನು ನಾನೇ ತೀರಿಸುತ್ತೇನೆ’ ಎಂದು ಹೇಳಿದರಲ್ಲದೇ, ತಮ್ಮ ಉಳಿತಾಯ ಮತ್ತು ತಮಗೆ ಬರುತ್ತಿದ್ದ ಪಿಂಚಣಿ ಹಣದಿಂದ ಕಂತುಗಳಲ್ಲಿ ಆ ಸಾಲವನ್ನು ಮರುಪಾವತಿಸಲಾರಂಭಿಸಿದರು. ಈ ವಿಷಯ ಹೇಗೋ ಪತ್ರಕರ್ತರಿಗೆ ಗೊತ್ತಾಯಿತು. ಇದನ್ನು ಅವರು ಪತ್ರಿಕೆಯಲ್ಲಿ ವರದಿ ಮಾಡಿದರು. ಈ ಸುದ್ದಿ ಕಾಳ್ಗಿಚ್ಚಿನಂತೆ ದೇಶಾದ್ಯಂತ ಹರಡಿತು. ಶಾಸ್ತ್ರಿಯವರ ಕುಟುಂಬ ಸಾಲದಲ್ಲಿ ಇರುವುದನ್ನು ಸಹಿಸದ ದೇಶವಾಸಿಗಳು ಲಲಿತಾ ಶಾಸ್ತ್ರಿಯವರ ಹೆಸರಿಗೆ ಹಣವನ್ನು ಮನಿಯಾರ್ಡರ್ ಮೂಲಕ ಕಳಿಸಲಾರಂಭಿಸಿದರು. ಎಂಟಾಣೆ, ಒಂದು ರುಪಾಯಿಯಿಂದ ಹಿಡಿದು, ಕಾರಿನ ಮೂಲ ಬೆಲೆ ಹನ್ನೆರಡು ಸಾವಿರ ರುಪಾಯಿ ತನಕ ಜನ ಹಣ ಕಳಿಸಿದ್ದರು. ಕೂಲಿಕಾರರು, ಬಡವರು, ಶ್ರೀಮಂತರು ಎಂಬ ಭೇದ-ಭಾವವಿಲ್ಲದೇ ಜನ ಹಣ ಕಳಿಸಿದ್ದರು. ಒಂದು ವರ್ಷದವರೆಗೂ ಲಲಿತಾ ಶಾಸ್ತ್ರಿ ಹೆಸರಿನಲ್ಲಿ ಹಣ ಬರುತ್ತಲೇ ಇತ್ತು. ‘ಯಾರೂ ಹಣ ಕಳಿಸಬೇಡಿ’ ಎಂದು ಮನವಿ ಮಾಡಿಕೊಂಡರೂ ಹಣ ಬರುವುದು ನಿಂತಿರಲಿಲ್ಲ. ದೇಶದ ಮಹಾಜನತೆ ಕಳಿಸಿದ ಹಣದಲ್ಲಿ ನೂರಾರು ಕಾರುಗಳನ್ನು ಖರೀದಿಸಬಹುದಿತ್ತು. ಆದರೆ ಲಲಿತಾ ಶಾಸ್ತ್ರಿಯವರು ಒಂದು ಪೈಸೆಯನ್ನೂ ಸ್ವೀಕರಿಸಲಿಲ್ಲ. ಯಾವ ಮನಿಯಾರ್ಡರನ್ನೂ ನಗದೀಕರಿಸಲಿಲ್ಲ!
ಈ ಕಾರು ಇಂದಿಗೂ ಸುಸ್ಥಿತಿಯಲ್ಲಿದೆ. ಇದು ಶಾಸ್ತ್ರಿಯವರ ಶಿಸ್ತು, ಸರಳ ಜೀವನ ಮತ್ತು ಅವರ ಕುಟುಂಬದ ಮೇಲಿನ ಪ್ರೀತಿಯ ದ್ಯೋತಕವಾಗಿ ಆ ಕಾರು ಅಲ್ಲಿ ನಿಂತಿದೆ. ಅಲ್ಲಿಂದ ಹೊರಬರುವಾಗ ಅನಿಸಿತು – ರೋಡ್ ರೋಲರ್‌ನಂಥ ಅಧಿಕಾರವಿದ್ದರೂ, ದಾರಿಯ ಬದಿಯ ಹೂವಿನ ಗಿಡಕ್ಕೆ ಪೆಟ್ಟು ಮಾಡದೇ ಸಾಗುವ ಕಲೆಯೇ ಅಸಲಿ ರಾಜಕೀಯ ಅಲ್ಲವೇ ?
•••••••••••••••••
ಡಿ.ಎಂ. ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ ….
ಚಿಕ್ಕಮಗಳೂರು

