ಲೋಕೋಪಯೋಗಿ ಇಲಾಖೆ ಕಾಮಗಾರಿಗಳಲ್ಲಿ ಅಂಗನವಾಡಿ, ಶಾಲಾ ಕಟ್ಟಡಗಳಿಗೆ ಆದ್ಯತೆ ನೀಡಿ #avintvcom

ಲೋಕೋಪಯೋಗಿ ಇಲಾಖೆ ಕಾಮಗಾರಿಗಳಲ್ಲಿ ಅಂಗನವಾಡಿ, ಶಾಲಾ ಕಟ್ಟಡಗಳಿಗೆ ಆದ್ಯತೆ ನೀಡಿ : ಗೋವಿಂದ ಕಾರಜೋಳ
ದಾವಣಗೆರೆ ಜ.07 (ಕರ್ನಾಟಕ ವಾರ್ತೆ)-
ಲೋಕೋಪಯೋಗಿ ಇಲಾಖೆಯ ವತಿಯಿಂದ ಕೈಗೊಳ್ಳುವ ಕಾಮಗಾರಿಗಳಲ್ಲಿ ಅಂಗನವಾಡಿ, ಶಾಲೆಗಳು ಹಾಗೂ ಸಮುದಾಯ ಭವನಗಳಿಗೆ ಆದ್ಯತೆ ನೀಡಿ ಎಂದು ಉಪಮುಖ್ಯಮಂತ್ರಿಗಳು ಹಾಗೂ ಲೋಕೋಪಯೋಗಿ ಸಚಿವರಾದ ಗೋವಿಂದ ಕಾರಜೋಳ ಹೇಳಿದರು.
ಗುರುವಾರ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ನಡೆದ ಲೋಕೋಪಯೋಗಿ ಇಲಾಖೆಯ ದಾವಣಗೆರೆ ವಿಭಾಗದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಬಹಳಷ್ಟು ಇಲಾಖೆಗಳು ರಸ್ತೆ, ಚರಂಡಿ ಕಾಮಗಾರಿಗಳಿಗೆ ಹಣ ನೀಡುವುದರಿಂದ ಕಾಮಗಾರಿಗಳು ಆದ ಕಡೆಯಲ್ಲಿಯೇ ಮತ್ತೆ ಮತ್ತೆ ಆಗುವುದರಿಂದ ಪ್ರಯೋಜನವಿಲ್ಲ. ರಸ್ತೆ ಹಾಗೂ ಚರಂಡಿ ಕಾಮಗಾರಿಗಳಿಗೆ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‍ರಾಜ್, ಜಿ.ಪಂ, ಸಣ್ಣ ನೀರಾವರಿ ಮುಂತಾದ ಇಲಾಖೆಗಳು ಹಣ ನೀಡುವುದರಿಂದ ಕಾಮಗಾರಿಗಳು ಪುನರಾವರ್ತಿತವಾಗುತ್ತಿವೆ. ಆದ ಕಾರಣ ಇನ್ನು ಮುಂದೆ ಅಂಗನವಾಡಿಗಳು, ಶಾಲಾ ಕಟ್ಟಡಗಳು ಮತ್ತು ಸಮುದಾಯ ಭವನಕ್ಕೆ ಹೆಚ್ಚಿನ ಆದ್ಯತೆ ನೀಡಬೇಕೆಂದರು.
ಬಹುತೇಕ ಎಸ್‍ಸಿ/ಎಸ್‍ಟಿ ಕಾಲೋನಿಗಳಲ್ಲಿ ಅವರ ಮನೆಗಳ ಮುಂದಿನ ರಸ್ತೆಯು ಮನೆ ಬಾಗಿಲಿಗಿಂತ ಒಂದರಿಂದ ಎರಡು ಅಡಿ ಎತ್ತರವಿರುತ್ತದೆ. ಹಾಗಾಗಿ ಮಳೆ ನೀರು ಮನೆ ಒಳಗೆ ನುಗ್ಗುತ್ತಿದೆ. ಆದ ಕಾರಣ ಕೇವಲ ರಸ್ತೆ ಕಾಮಗಾರಿಗಳಿಗೇ ಹಣ ವಿನಿಯೋಗಿಸುವ ಬದಲು, ಲಭ್ಯವಿರುವ ಸ್ಥಳಗಳಲ್ಲಿ ಉದ್ಯೋಗ ಸೃಜನೆಯಾಗುವಂತಹ ಹಾಗೂ ಇಲಾಖೆಗೆ ಶಾಶ್ವತ ಆಸ್ತಿಯಾಗುವಂತಹ ಪುಟ್ಟ ಪುಟ್ಟ ಅಂಗಡಿ, ಮಳಿಗೆಗಳನ್ನು ನಿರುದ್ಯೋಗಿಗಳಿಗೆ ನಿರ್ಮಿಸಿಕೊಟ್ಟಲ್ಲಿ ಅವರಿಗೆ ಉದ್ಯೋಗ ದೊರಕಿಸಿಕೊಟ್ಟಾಂಗುತ್ತದೆ ಎಂದರು.